Wednesday, June 29, 2022

Latest Posts

ಕೋರಿ ಸಿದ್ದೇಶ್ವರ ಜಾತ್ರಾ ಮಹೋತ್ಸವ: ಆಡಳಿತ ಮಂಡಳಿಯ ಹತ್ತು ಜನರ ವಿರುದ್ಧ ಎಫ್ಐಆರ್

ಹೊಸದಿಗಂತ ವರದಿ,ಕಲಬುರಗಿ:

ನಾಲವಾರ ಗ್ರಾಮದ ಶ್ರೀ ಕೋರಿಸಿದ್ದೇಶ್ವರ ರಥೋತ್ಸವವನ್ನು ಸರ್ಕಾರದ ಆದೇಶ ಮೀರಿ, ಲಕ್ಷಾಂತರ ಭಕ್ತರ ಜಯಘೋಷದೊಂದಿಗೆ ಅದ್ಧೂರಿಯಾಗಿ ನಡೆಸಿದ ಹಿನ್ನೆಲೆ, ಜಿಲ್ಲೆಯ ನಾಲವಾರ ಗ್ರಾಮದ ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಕೊರೋನಾ ಹಿನ್ನೆಲೆ ರಾಜ್ಯ ಸರ್ಕಾರ ಕೆಲ ಮಾರ್ಗಸೂಚಿಗಳನ್ನು ಹೊರಡಿಸಿದೆ. ಆದರೆ ದೇವಸ್ಥಾನದ ಆಡಳಿತ ಮಂಡಳಿ ಸರ್ಕಾರದ ಆದೇಶಕ್ಕೆ ಕಿಮ್ಮತ್ತು ನೀಡದೆ, ಲಕ್ಷಾಂತರ ಭಕ್ತರನ್ನು ಸೇರಿಸಿ ಅದ್ಧೂರಿಯಾಗಿ ರಥೋತ್ಸವ ನೆರವೇರಿಸಿದೆ.

ಜಾತ್ರೆಗೂ ಮುನ್ನ ಶಾಂತಿ ಸಭೆ ನಡೆಸಿದ ತಾಲೂಕು ಆಡಳಿತ ಜಾತ್ರೆ ರದ್ದುಪಡಿಸುವಂತೆ ಸೂಚಿಸಿತ್ತು. ಆದರೂ, ಆಡಳಿತ ಮಂಡಳಿ ರಥೋತ್ಸವ ನೆರವೇರಿಸಿದೆ. ಜಾತ್ರೆಯಲ್ಲಿ ಯಾವೊಬ್ಬ ವ್ಯಕ್ತಿಯೂ ಮಾಸ್ಕ್ ಧರಿಸಿರಲಿಲ್ಲ.

ತಹಶೀಲ್ದಾರರು, ಪೊಲೀಸರು ಜಾತ್ರೆ ತಡೆಯಲು ಶತ ಪ್ರಯತ್ನ ನಡೆಸಿದ್ದಾರೆ. ಲಘು ಲಾಠಿ ಪ್ರಹಾರ ಸಹ ಮಾಡಲಾಗಿದೆ. ಯಾವುದಕ್ಕೂ ಜಗ್ಗದೆ ಅದ್ಧೂರಿಯಾಗಿ ಜಾತ್ರೆ ನೆರವೇರಿಸಲಾಗಿದೆ.

ದೇವಸ್ಥಾನ ಮಂಡಳಿಯ ವಿರುದ್ಧ ಎಫ್ಐಆರ್

ತಾಲೂಕಾಡಳಿತದ ಆದೇಶ ಮಿರಿ ಕೋವಿಡ್ ನಿಯಮ ಉಲ್ಲಂಘನೆ ಮಾಡಿ, ರಥೋತ್ಸವ ನೆರವೇರಿಸಿದಕ್ಕಾಗಿ ದೇವಸ್ಥಾನದ ಆಡಳಿತ ಮಂಡಳಿಯ ಹತ್ತು ಜನರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.

ಸರ್ಕಾರದ ಮನವಿ ಮತ್ತು ಸೂಚನೆಗೆ ಸ್ಪಂದಿಸದೆ ಅಪಾರ ಪ್ರಮಾಣದ ಭಕ್ತರ ಜೀವದೊಂದಿಗೆ ಆಟವಾಡಿದ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಸ್ವಾಮಿಜಿಗಳ ವರ್ತನೆಗೆ ಸ್ಥಳೀಯ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂತಹ ಸಮಯದಲ್ಲಿ ಈ ರೀತಿ ಲಕ್ಷಾಂತರ ಜನರನ್ನು ಸೇರಿಸಿ ಜಾತ್ರೆ ನೆರೆವೇರಿಸುವ ಅನಿವಾರ್ಯತೆ ಏನಿತ್ತು? ಎಂದು ಹೋರಾಟಗಾರರು ದೇವಸ್ಥಾನ ಆಡಳಿತ ಮಂಡಳಿ ವಿರುದ್ಧ ಕೆಂಡ ಕಾರಿದ್ದಾರೆ. ಜಾತ್ರೆಗೆ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss