ಕಲಬುರಗಿ ಪಾಲಿಕೆ ಮೇಯರ್ ಮೀಸಲಾತಿ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ: ಹೈಕೋರ್ಟ್ ಗುಲ್ಬರ್ಗ ಪೀಠದಲ್ಲಿ ರಿಟ್ ಅರ್ಜಿ ವಿಚಾರಣೆ

ಹೊಸದಿಗಂತ ವರದಿ,ಕಲಬುರಗಿ:

ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಮೀಸಲಾತಿ ಮತ್ತು ಮತದಾರರ ಪಟ್ಟಿಯಲ್ಲಿ ಬೇರೆ ಜಿಲ್ಲೆಗಳ ವಿಧಾನ ಪರಿಷತ್ ಸದಸ್ಯರ ಹೆಸರು ಸೇರ್ಪಡೆ ಮಾಡಿರುವುದನ್ನು ಪ್ರಶ್ನಿಸಿರುವ ಎರಡು ರಿಟ್ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ಶುಕ್ರವಾರ ಮತ್ತೇ ಕೈಗೆತ್ತಿಕೊಳ್ಳಲಿದೆ. ಇದರಿಂದಾಗಿ ಚುನಾವಣೆಯ ಕುತೂಹಲ ಮತ್ತೊಂದು ದಿನ ಮುಂದೂಡಿಕೆಯಾಗಿದೆ.

ಹೈಕೋರ್ಟ್ ಗುಲ್ಬರ್ಗ ಪೀಠದ ನ್ಯಾಯಮೂರ್ತಿಗಳಾದ ಇ.ಎಸ್.ಇಂದ್ರೀಶ್ ಅವರಿದ್ದ ನ್ಯಾಯಪೀಠವು ಗುರುವಾರ ವರ್ಚುವಲ್ ಆಗಿ ವಿಚಾರಣೆ ನಡೆಸಿದರು. ಅರ್ಜಿದಾರರ ವಕೀಲರ ಪರ ವಾದ ಮಂಡಿಸಿದ ಬಳಿಕ ಅಡ್ವೋಕೇಟ್ ಜನರಲ್ ಅವರು ವಾದ ಮಂಡಿಸಲು ಸಮಯ ನೀಡುವಂತೆ ಕೋರಿದರು. ಅದಕ್ಕೆ ನ್ಯಾಯಾಧೀಶರು ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿಸಿದರು. ಕಲಾಪ ಶುರುವಾಗುತ್ತಲೇ ಮೊದಲು ಇದೇ ವಿಷಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಪ್ರಕಟಿಸಿದರು.

ಮೀಸಲಾತಿ ಪ್ರಶ್ನಿಸಿ ಪಾಲಿಕೆ ಸದಸ್ಯ ಯಲ್ಲಪ್ಪ ನಾಯ್ಕೋಡಿ ಹಾಗೂ ಮತದಾರರ ಪಟ್ಟಿಯಲ್ಲಿ ನಿಯಮ ಉಲ್ಲಂಘನೆ ಮಾಡಿ ಐವರು ಬಿಜೆಪಿ ವಿಧಾನ ಪರಿಷತ್‍ಸದಸ್ಯರ ಹೆಸರುಗಳನ್ನು ಸೇರ್ಪಡೆ ಮಾಡಿರುವುದನ್ನು ಪ್ರಶ್ನಿಸಿ ಮಾಜಿ ಸದಸ್ಯ ಹುಲಿಗೆಪ್ಪ ಕನಕಗಿರಿ ಇತರರು ಹೈಕೋರ್ಟ್‍ನಲ್ಲಿ ರಿಟ್ ಅರ್ಜಿ ದಾಖಲಿಸಿದ್ದಾರೆ.

ಅರ್ಜಿದಾರರ ಪರವಾಗಿ ವಕೀಲರಾದ ಮಹಾದೇವ ಪಾಟೀಲ್ ಮತ್ತು ಎ.ಎಂ.ನಾಗರಾಳ ಅವರು ಗುರುವಾರ ವಾದ ಮಂಡಿಸಿ, ತಮ್ಮ ಆಕ್ಷೇಪಣೆ ನ್ಯಾಯಾಧೀಶರ ಮುಂದಿರಿಸಿದರು. ವಿಧಾನ ಪರಿಷತ್ ಸದಸ್ಯರ ಪರವಾಗಿ ನ್ಯಾಯವಾದಿ ಗೌರಿಶಂಕರ ಕಾಶಂಪುರ, ಸರ್ಕಾರದ ಪರವಾಗಿ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಿ ಅವರು ಹಾಜರಾಗಿದ್ದರು. ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ ನಂತರ ಸರ್ಕಾರದ ಪರ ವಾದ ಮಂಡನೆಗೆ ಸಮಯ ಕೋರಿದರು. ಹೀಗಾಗಿ ಪ್ರತಿವಾದಿಗಳ ಪರ ಮತ್ತು ಸರ್ಕಾರದ ಪರ ವಾದ ಶುಕ್ರವಾರ ಮಂಡಿಸಲಾಗುತ್ತದೆ.

ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಆಯ್ಕೆಯ ಚುನಾವಣೆ ನಡೆಸಲು ಫೆ.5ರಂದು ದಿನಾಂಕ ನಿಗದಿಪಡಿಸಿ ಪ್ರಾದೇಶಿಕ ಆಯುಕ್ತರು ಅಧಿಸೂಚನೆ ಪ್ರಕಟಿಸಿದ್ದಾರೆ. ಅದಕ್ಕೆ ಪೂರಕವಾಗಿ ಸಹಾಯಕ ಚುನಾವಣಾ ಅಧಿಕಾರಿಗಳನ್ನು ನೇಮಕ ಮಾಡಿದ್ದು, ವೇಳಾಪಟ್ಟಿ ಪ್ರಕಟಿಸಿದ್ದಾರೆ. ಶುಕ್ರವಾರ ಪ್ರತಿವಾದ ಆಲಿಸಿದ ನಂತರ ನ್ಯಾಯಾಧೀಶರು ನೀಡುವ ತೀರ್ಪು ಆಧರಿಸಿ ಮೇಯರ್ ಎಲೆಕ್ಷನ್ ಭವಿಷ್ಯ ನಿರ್ಧಾರವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!