ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವೆ: ಗೋವಿಂದ ಕಾರಜೋಳ

ಹೊಸದಿಗಂತ ಚಿತ್ರದುರ್ಗ:

ಕೆಲವರು ನನ್ನನ್ನು ಹೊರಗಿನವನು ಎಂದು ಅಪ ಪ್ರಚಾರ ಮಾಡಿದರು. ಆದರೆ ಕ್ಷೇತ್ರದ ಜನ ಪ್ರೀತಿ, ಅಭಿಮಾನದಿಂದ ನನಗೆ ಮತ ಹಾಕಿದ್ದಾರೆಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಹೇಳಿದರು.

ಚುನಾವಣೆ ಮುಗಿದ ಮರುದಿನ ಶನಿವಾರ ನಗರದ ಖಾಸಗಿ ಹೊಟೇಲೊಂದರಲ್ಲಿ ಚಹ ಸೇವಿಸುತ್ತಾ ಮಾಧ್ಯಮದವರೊಂದಿಗೆ ಮಾತನಾಡಿದರು. ಉರಿ ಬಿಸಿಲನ್ನು ಲೆಕ್ಕಿಸದೆ ಜನ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ದೊರೆತು 70 ವರ್ಷಗಳಾಗಿದ್ದರೂ ಕುಡಿಯುವ ನೀರಿಲ್ಲ. ಯಾವ ರೀತಿ ಆಡಳಿತ ನಡೆಸಿದ್ದಾರೆಂಬುದೇ ಸೋಜಿಗ. ಈ ಕ್ಷೇತ್ರದ ಜನ ಮುಗ್ದರು, ಅಮಾಯಕರು, ಭಗವಂತ ನನಗೆ ಸೇವೆ ಮಾಡಲು ಅವಕಾಶ ಕೊಟ್ಟರೆ ಪ್ರಾಮಾಣಿಕವಾಗಿ ಅಭಿವೃದ್ದಿಗೆ ದುಡಿಯುತ್ತೇನೆ ಎಂದರು.

ಸ್ಥಳೀಯವಾಗಿ ಬೇರೆ ಪಕ್ಷದ ಶಾಸಕರುಗಳಿದ್ದಾರೆ. ಚಿತ್ರದುರ್ಗ, ತುಮಕೂರು ಜಿಲ್ಲೆಯ ಪ್ರದೇಶಗಳು ಲೋಕಸಭಾ ಕ್ಷೇತ್ರಕ್ಕೆ ಒಳಪಡುತ್ತವೆ. ಕರ್ನಾಟಕ ಆಂಧ್ರ ಗಡಿಯಲ್ಲಿ ಮತದಾರರಿದ್ದಾರೆ. ಸಮಯದ ಅಭಾವದಿಂದ ಎಷ್ಟು ಸಾಧ್ಯವೋ ಅಷ್ಟು ಜನರನ್ನು ಭೇಟಿ ಮಾಡಿ ಮತಯಾಚಿಸಿದ್ದೇನೆ ಎಂದು ಹೇಳಿದರು.

ಹೋಬಳಿ, ಜಿಲ್ಲಾ ಮಟ್ಟದಲ್ಲಿ 50 ರಿಂದ 60 ಸಭೆ ನಡೆಸಿದ್ದೇನೆ. ಕಾರ್ಯಕರ್ತರು, ಮುಖಂಡರುಗಳು ಚುನಾವಣೆಯಲ್ಲಿ ನನ್ನ ಪರ ಕೆಲಸ ಮಾಡಿದ್ದಾರೆ. ಮುಂದಿನ ತಿಂಗಳು ನಡೆಯುವ ಮತ್ತೊಂದು ಹಂತದ ಚುನಾವಣೆಗೆ ಉತ್ತರ ಕರ್ನಾಟಕದಲ್ಲಿ ಪ್ರವಾಸ ಮಾಡಿ ನಮ್ಮ ಪಕ್ಷದ ಅಭ್ಯರ್ಥಿಗಳ ಪರ ಮತಯಾಚಿಸುತ್ತೇನೆ. ಭಾನುವಾರ ದಾವಣಗೆರೆಗೆ ಹೋಗುತ್ತೇನೆ. ಎಲ್ಲೆಲ್ಲಿ ಪ್ರಧಾನಿ ಮೋದಿ ಬರುತ್ತಾರೋ ಅಲ್ಲೆಲ್ಲಾ ಇರುತ್ತೇನೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಜನರ ಸೇವೆ ಮಾಡಿದರೆ ಭಗವಂತನ ಸೇವೆ ಮಾಡಿದಂತೆ ಎಂದುಕೊಂಡಿದ್ದೇನೆ ಎಂದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!