ಹೊಸದಿಗಂತ ವರದಿ,ಚಿತ್ರದುರ್ಗ :
‘ಹೆಣ್ಣು ಕೊಟ್ಟವರು ಕಣ್ಣು ಕೊಟ್ಟವರು’ ಎಂಬ ಗಾದೆ ಮಾತಿದೆ. ಆದರೆ ತನ್ನ ಕರುಳ ಕುಡಿಯನ್ನು ಕೊಟ್ಟು ಮದುವೆ ಮಾಡಿದ ಅಳಿಯನೇ ತನ್ನ ಅತ್ತೆ, ಮಾವನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ತಾಲ್ಲೂಕಿನ ಬೊಮ್ಮಕ್ಕನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ಗ್ರಾಮದ ಹನುಮಂತಪ್ಪ ಹಾಗೂ ಆತನ ಪತ್ನಿ ತಿಪ್ಪಮ್ಮ ಅವರನ್ನು ಅವರದೇ ಜಮೀನಿನಲ್ಲಿ ಬರ್ಬರ ಹತ್ಯೆ ಮಾಡಲಾಗಿದೆ. ಹನುಮಂತಪ್ಪ ಹಾಗೂ ಪತ್ನಿ ತಿಪ್ಪಮ್ಮ ಗುರುವಾರ ರಾತ್ರಿ ಜಮೀನಿಗೆ ತೆರಳಿದ್ದರು. ಜಮೀನಿನಲ್ಲಿನ ಈರುಳ್ಳಿ ಬೆಳೆಗೆ ನೀರು ಹಾಯಿಸಲು ಹೋಗಿದ್ದರು ಎನ್ನಲಾಗಿದೆ. ಹೀಗೆ ಹೋದ ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಮಗಳನ್ನು ಕೊಟ್ಟು ಮದುವೆ ಮಾಡಿದ್ದ ಅಳಿಯ ಮಂಜುನಾಥ ಎಂಬಾತನೇ ತನ್ನ ಅತ್ತೆ, ಮಾವನನ್ನು ಹತ್ಯೆ ಮಾಡಿರುವ ಆರೋಪಿ.
ಹತ್ಯೆಯಾಗಿರುವ ಹನುಮಂತಪ್ಪ ಹಾಗೂ ತಿಪ್ಪಮ್ಮ ದಂಪತಿ ಕಳೆದ ಒಂದು ವರ್ಷದ ಹಿಂದೆ ಪುತ್ರಿ ಹರ್ಷಿತಾಳನ್ನು ಅದೇ ಗ್ರಾಮದ ತಮ್ಮ ಸಂಬಂಧಿ ಮಂಜುನಾಥ್ ಎಂಬಾತನಿಗೆ ಕೊಟ್ಟು ವಿವಾಹ ಮಾಡಿದ್ದರು. ಪಿಯುಸಿ ವ್ಯಾಸಂಗ ಮಾಡಿದ್ದ ಹರ್ಷಿತಾ ಓದಿನ ಕಡೆಗೆ ಹೆಚ್ಚಿನ ಆಸಕ್ತಿ ಹೊಂದಿದ್ದರು. ಹಾಗಾಗಿ ಹೊಲ ಮನೆ ಕೆಲಸದ ಬಗ್ಗೆ ಗಮನ ನೀಡುತ್ತಿರಲಿಲ್ಲ ಎಂದು ಪತಿ ಮಂಜುನಾಥ್ ಖ್ಯಾತೆ ತೆಗೆದು ಆಗಾಗ ಜಗಳ ಮಾಡುತ್ತಿದ್ದ.
ಇದೇ ವಿಚಾರವಾಗಿ ಮಂಜುನಾಥ್ ತನ್ನ ಪತ್ನಿ ಹರ್ಷಿತಾಗೆ ಪದೇ ಪದೇ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಬೇಸತ್ತ ದಂಪತಿ ತಮ್ಮ ಪುತ್ರಿ ಹರ್ಷಿತಾಳನ್ನು ತವರುಮನೆಗೆ ಕರೆತಂದಿದ್ದರು. ಇದರಿಂದ ಸಿಟ್ಟಿಗೆದ್ದ ಮಂಜುನಾಥ್ ಮನಸ್ಸಿನಲ್ಲೇ ಕತ್ತಿ ಮಸೆಯುತ್ತಿದ್ದ. ಆಗಾಗ ಕೊಲೆ ಮಾಡುವ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ.
ಇದೇ ಸಮಯಕ್ಕೆ ಕಾಯುತ್ತಿದ್ದ ಆರೋಪಿ ಮಂಜುನಾಥ, ಗುರುವಾರ ಸಂಜೆ ಹನುಮಂತಪ್ಪ ಹಾಗೂ ತಿಪ್ಪಮ್ಮ ಹೊಲಕ್ಕೆ ಹೋಗಿದ್ದನ್ನು ಕಂಡು ಹಿಂಬಾಲಿಸಿದ್ದಾನೆ. ಹೊಲದಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಆರೋಪಿ ಮಂಜುನಾಥ, ಹನುಮಂತಪ್ಪ ಹಾಗೂ ತಿಪ್ಪಮ್ಮ ಅವರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾನೆ.
ಘಟನೆಗೆ ಮಂಜುನಾಥ್ ಅವರ ಕುಟುಂಬ ಹಾಗೂ ಸಂಬಂಧಿಕರ ಕುಮ್ಮಕ್ಕು ಕಾರಣ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಮೃತ ದಂಪತಿಯ ಪುತ್ರಿ ಹರ್ಷಿತಾ ತುರುವನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಸಾಕ್ಷ್ಯ ಸಂಗ್ರಹಿಸಿದ್ದಾರೆ.