May 26, 2026
Tuesday, May 26, 2026
spot_img

ಕುಕ್ಕೆ ಶ್ರೀ ಕ್ಷೇತ್ರಕ್ಕೆ ಬರುವ ನಾಲ್ಕು ಪ್ರವೇಶ ರಸ್ತೆಗಳಲ್ಲಿ ಏಕಬಳಕೆ ಪ್ಲಾಸ್ಟಿಕ್ ತಪಾಸಣೆ ಚೆಕ್ ಪೋಸ್ಟ್ ಸ್ಥಾಪಿಸಿ: ಸಚಿವ ಈಶ್ವರ ಖಂಡ್ರೆ ಆದೇಶ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರಲು ಇರುವ ನಾಲ್ಕು ಪ್ರವೇಶ ರಸ್ತೆಗಳಲ್ಲಿ ಏಕಬಳಕೆ ಪ್ಲಾಸ್ಟಿಕ್ ತಪಾಸಣೆಗಾಗಿ ಚೆಕ್ ಪೋಸ್ಟ್ ಸ್ಥಾಪಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅವರು ಆದೇಶ ನೀಡಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವರ ದರುಶನ ಮಾಡಿ ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಇಂದು ದೇವಾಲಯಕ್ಕೆ ಬರುವಾಗ ರಸ್ತೆಯ ಬದಿಯಲ್ಲಿ ಪ್ಲಾಸ್ಟಿಕ್ ಬಾಟಲಿ, ತಟ್ಟೆ ಇತ್ಯಾದಿ ಬಿದ್ದಿರುವುದನ್ನು ನೋಡಿ ಆತಂಕವಾಯಿತು. ಕೂಡಲೇ ಅಧಿಕಾರಿಗಳ ಸಭೆ ನಡೆಸಿ ಚೆಕ್ ಪೋಸ್ಟ್ ಸ್ಥಾಪಿಸಿ 2 ಹಂತದ ತಪಾಸಣೆ ಮಾಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಡೀಮ್ಡ್ ಅರಣ್ಯಕ್ಕೆ ಜಂಟಿ ಸರ್ವೆ

ರಾಜ್ಯದಲ್ಲಿ ಡೀಮ್ಡ್ ಅರಣ್ಯಕ್ಕೆ ಸಂಬಂಧಿಸಿದಂತೆ ಸಮಸ್ಯೆ ಇದೆ. ಬಿಜೆಪಿ ಕಾರ್ಯಕಾಲದಲ್ಲಿ 2022ರಲ್ಲಿ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ 3.33 ಲಕ್ಷ ಹೆಕ್ಟೇರ್ ಭೂಮಿ ಡೀಮ್ಡ್ ಎಂದು ಉಲ್ಲೇಖಿಸಲಾಗಿದೆ. ಆದರೆ ಇದರಲ್ಲೂ ಅಂಗನವಾಡಿ, ಸರ್ಕಾರಿ ಆಸ್ಪತ್ರೆ, ಪಟ್ಟಾ ಭೂಮಿ ಇದ್ದು, ಈ ಸಮಸ್ಯೆ ಪರಿಹರಿಸಲು ಕಂದಾಯ ಇಲಾಖೆಯ ಜೊತೆಯಲ್ಲಿ ಜಂಟಿ ಸರ್ವೆ ನಡೆಸಲಾಗುತ್ತಿದೆ. ಕಂದಾಯ ಇಲಾಖೆಯಲ್ಲಿ ಮೋಜಿಣಿದಾರರು ಕೆಲ ತಿಂಗಳಿಂದ ಮುಷ್ಕರ ನಡೆಸುತ್ತಿದ್ದಾರೆ. ಜೊತೆಗೆ ಸರ್ವೆಯರ್ ಗಳ ಕೊರತೆ ಇರುವುದಾಗಿ ಉಡುಪಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಅರಣ್ಯ ಜಂಟಿ ಸರ್ವೆಗಾಗಿಯೇ ವಿಶೇಷವಾಗಿ ಸಿಬ್ಬಂದಿ ನಿಯೋಜಿಸಲು ತಿಳಿಸಿದ್ದು ಈ ಬಗ್ಗೆ ಕಂದಾಯ ಸಚಿವರೊಂದಿಗೆ ಸಮಾಲೋಚಿಸುವುದಾಗಿ ತಿಳಿಸಿದರು

ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಕ್ರಮ

ಮಾನವನ ಜೀವ ಅತ್ಯಮೂಲ್ಯವಾಗಿದ್ದು, ಒಂದೇ ಒಂದು ಪ್ರಾಣಹಾನಿಯೂ ಆಗಬಾರದು. ಈ ನಿಟ್ಟಿನಲ್ಲಿ ಕ್ರಮ ವಹಿಸಲು ಅರಣ್ಯಾಧಿಕಾರಿಗಳಿಗೆ ತಿಳಿಸಲಾಗಿದೆ. ವನ್ಯಜೀವಿಗಳ ಸಂಚಾರದ ಬಗ್ಗೆ ನಿಗಾ ಇಡಲು ಡ್ರೋನ್ ಸೇರಿದಂತೆ ಅತ್ಯಾಧುನಿಕ ಉಪಕರಣಗಳನ್ನು ಬಳಸಲಾಗುತ್ತಿದೆ.ಅಲ್ಲದೆ ಕಮಾಂಡ್ ಸೆಂಟರ್ ತೆರೆಯಲಾಗಿದೆ ಎಂದು ಸಚಿವರು ಹೇಳಿದರು.

ಹೆಚ್ಚಿನ ಬೋನ್ ವ್ಯವಸ್ಥೆ

ಕುಕ್ಕೆ ಸುಬ್ರಹ್ಮಣ್ಯಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಅವರ ಮೇಲೆ ವನ್ಯಜೀವಿ ದಾಳಿ ಮಾಡದಂತೆ ಎಚ್ಚರ ವಹಿಸಲು ಮತ್ತು ಚಿರತೆ ಸಮಸ್ಯೆ ಇರುವ ಕಡೆಗೆ ಹೆಚ್ಚಿನ ಬೋನು ನಿಯೋಜಿಸಲು ಆದೇಶಿಸಲಾಗಿದೆ. ಆನೆಗಳು ಬಾರದಂತೆ ಕಂದಕ ಕಾಮಗಾರಿ ಪೂರ್ಣಗೊಳಿಸಲು ಮತ್ತು ಸೌರ ತಂತಿ ಬೇಲಿ ಅಳವಡಿಸಲು ಸೂಚಿಸಲಾಗಿದೆ ಎಂದು ಸಚಿವರು ನುಡಿದರು.

ಸಂಸ್ಕರಿಸದೆ ನದಿಗೆ ತ್ಯಾಜ್ಯ ಹರಿಸಿದರೆ ಕ್ರಿಮಿನಲ್ ಮೊಕದ್ದಮೆ

ನದಿಗೆ ಸಂಸ್ಕರಿಸದೆ ತ್ಯಾಜ್ಯ ಹರಿಸಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಕುಮಾರಧಾರಾ ನದಿಗೆ ತ್ಯಾಜ್ಯವನ್ನು ನೇರವಾಗಿ ಹರಿಯಬಿಡುತ್ತಿರುವವರ ಮೇಲೆ ಕ್ರಮ ವಹಿಸಲು ಸೂಚಿಸಲಾಗಿದೆ. ಸ್ಥಳೀಯ ಸಂಸ್ಥೆಗಳು ಈ ಬಗ್ಗೆ ನಿಗಾ ಇಡಬೇಕು, ತ್ಯಾಜ್ಯ ಜಲ ಸಂಸ್ಕರಣಾ ಘಟಕಗಳ ಪರಿಶೀಲನೆ ಮಾಡಬೇಕು, ಯಾರೇ ಸಂಸ್ಕರಿಸದೆ ತ್ಯಾಜ್ಯ ನದಿಗೆ ಬಿಟ್ಟಿದ್ದರೆ ಮೊದಲಿಗೆ ಎಚ್ಚರಿಕೆ ನೀಡಬೇಕು. ಪದೇ ಪದೇ ಇದೇ ತಪ್ಪು ಮಾಡಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ತಿಳಿಸಿದರು.

ಈ ಸಂದರ್ಭ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್.ಎಸ್.ಇಂಜಾಡಿ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ನಿಗಮ ಮಂಡಳಿ ಅಧ್ಯಕ್ಷೆ ಮಮತಾ ಗಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ, ಲೀಲಾ ಮನಮೋಹನ್, ಸೌಮ್ಯ ಭರತ್, ಪ್ರವೀಣ ರೈ ಮರುವಂಜ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಲೋಲಾಕ್ಷ ಕೈಕಂಬ, ಪ್ರಮುಖರಾದ ಅಭಿಲಾಶ್, ಗೋಪಾಲ್ ಎಣ್ಣೆಮಜಲು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !