ಜುಲೈ 1ರಿಂದ ಒಂದೇಬಾರಿ ಬಳಕೆಯಾಗ್ತಿದ್ದ ಪ್ಲಾಸ್ಟಿಕ್ ಉತ್ಪನ್ನಗಳೆಲ್ಲ ಸಂಪೂರ್ಣ ಬಂದ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:
ಪರಿಸರ ಮಾಲಿನ್ಯಕ್ಕೆ ಪ್ರಮುಖ ಕಾರಣವೆಂದು ಜಾಗತಿಕವಾಗಿ ಗುರುತಿಸಲ್ಪಟ್ಟಿರುವ ಏಕಬಳಕೆಯ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಲು ಭಾರತ ಸರ್ಕಾರವು ಮಹತ್ವದ ನಿರ್ಣಯ ತೆಗೆದುಕೊಂಡಿದ್ದು ಜುಲೈ 1 ರಿಂದ ಕಡ್ಡಾಯವಾಗಿ ಜಾರಿಗೆ ಬರುವಂತೆ ಒಂದೇ ಬಾರಿ ಬಳಕೆಯಾಗುತ್ತಿದ್ದ (ಸಿಂಗಲ್‌ ಯೂಸ್)‌ ಪ್ಲಾಸ್ಟಿಕ್ಅನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದೆ. ಇದರನ್ವಯ ಕಡಿಮೆ ಉತ್ಪಾದಕತೆ ಮತ್ತು ಹೆಚ್ಚು ಮಾಲಿನ್ಯಕಾರಕವಾದ ಏಕ ಬಳಕೆಯ ಪ್ಲಾಸ್ಟಿಕ್‌ ವಸ್ತುಗಳ ಬಳಕೆ ಸಂಪೂರ್ಣವಾಗಿ ಬಂದ್‌ ಆಗಲಿವೆ.

ನಿಷೇಧಿತ ವಸ್ತುಗಳ ಪಟ್ಟಿಯಲ್ಲಿ ಕಿವಿಯಲ್ಲಿ ಬಳಸುವ ಪ್ಲಾಸ್ಟಿಕ್ ಕಡ್ಡಿಗಳು(ಇಯರ್‌ ಬಡ್ಸ್) , ಬಲೂನ್‌ಗಳಿಗೆ ಬಳಸುವ ಪ್ಲಾಸ್ಟಿಕ್ ಕಡ್ಡಿಗಳು, ಪ್ಲಾಸ್ಟಿಕ್ ಧ್ವಜಗಳು, ಕ್ಯಾಂಡಿ ಸ್ಟಿಕ್‌ಗಳು, ಐಸ್ ಕ್ರೀಮ್ ಸ್ಟಿಕ್‌ಗಳು, ಅಲಂಕಾರಕ್ಕಾಗಿ ಪಾಲಿಸ್ಟೈರೀನ್ (ಥರ್ಮಾಕೋಲ್), ಪ್ಲಾಸ್ಟಿಕ್ ಪ್ಲೇಟ್‌ಗಳು, ಕಪ್‌ಗಳು, ಗ್ಲಾಸ್‌ಗಳು, ಪ್ಲಾಸ್ಟಿಕ್ ಫೋರ್ಕ್‌ಗಳು, ಚಮಚಗಳು, ಚಾಕುಗಳು,  ಟ್ರೇಗಳು, ಸ್ವೀಟ್ ಬಾಕ್ಸ್‌ಗಳ ಸುತ್ತ ಸುತ್ತುವ ಅಥವಾ ಪ್ಯಾಕಿಂಗ್ ಟೇಪ್‌ಗಳು, ಆಮಂತ್ರಣ ಕಾರ್ಡ್‌ಗಳು, ಸಿಗರೇಟ್ ಪ್ಯಾಕೆಟ್‌ಗಳು, 100 ಮೈಕ್ರಾನ್‌ಗಿಂತ ಕಡಿಮೆ ಪ್ಲಾಸ್ಟಿಕ್ ಅಥವಾ PVC ಬ್ಯಾನರ್‌ಗಳು, ಸ್ಟಿರರ್‌ಗಳು ಸೇರಿಕೊಂಡಿವೆ.

ಒಂದೇ ಬಾರಿ ಬಳಕೆಯಾಗುವ ಪ್ಲಾಸ್ಟಿಕ್‌ ಬಳಕೆಯ ಕುರಿತು ಈ ಹಿಂದೆಯೇ ಅಂದರೆ 2021 ಅಗಸ್ಟ್‌ 12 ರಂದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಕಾನೂನು ಜಾರಿ ಮಾಡಲಾಗಿತ್ತು. ಇದು ಏಕಬಳಕೆಯ ಪ್ಲಾಸ್ಟಿಕ್‌ ವಸ್ತುಗಳ ತಯಾರಿಕೆ, ಆಮದು, ದಾಸ್ತಾನು, ವಿತರಣೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸುತ್ತದೆ. ಅಲ್ಲದೇ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೂ ಸಹ 2022 ರ ವೇಳೆಗೆ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಹಂತಹಂತವಾಗಿ ಕೈಬಿಡುವಂತೆ ದೇಶದ ಜನತೆಯಲ್ಲಿ ಮನವಿ ಮಾಡಿದ್ದರು. ಇದರ ಮುಂದುವರೆದ ಭಾಗವಾಗಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದ್ದು ಪ್ಲಾಸ್ಟಿಕ್‌ ಬಳಕೆಯಿಂದಾಗುವ ಮಾಲಿನ್ಯವನ್ನು ತಡೆಗಟ್ಟಲಾಗುತ್ತಿದೆ.

ಇದನ್ನು ಹಂತ ಹಂತವಾಗಿ ಜಾರಿಗೆ ತರಲಾಗುತ್ತಿದ್ದು 2021ರ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ತಿದ್ದುಪಡಿ ನಿಯಮಗಳ ಅನುಸಾರ ಎಪ್ಪತ್ತೈದು ಮೈಕ್ರಾನ್‌ಗಳಿಗಿಂತ ಕಡಿಮೆ ದಪ್ಪವಿರುವ ಪ್ಲಾಸ್ಟಿಕ್‌ ಗಳನ್ನು ಸೆಪ್ಟೆಂಬರ್ 30, 2021ರಲ್ಲೇ ನಿಷೇಧಿಸಲಾಗಿದೆ. ಈಗ ಅದರ ಮುಂದುವರೆದ ಭಾಗವಾಗಿ ನೂರಾಇಪ್ಪತ್ತು ಮೈಕ್ರಾನ್‌ ಗಳಿಗಿಂತ ಕಡಿಮೆ ದಪ್ಪವಿರುವ ಪ್ಲಾಸ್ಟಿಕ್‌ಗಳು 2022ರ ಡಿಸೆಂಬರ್‌ ವೇಳೆಗೆ ಸಂಪೂರ್ಣವಾಗಿ ನಿಷೇಧಗೊಳ್ಳಲಿವೆ.

ಇದಲ್ಲದೇ 2022 ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣಾ ನಿಯಮದ ಅಡಿಯಲ್ಲಿ ಪ್ಲಾಸ್ಟಿಕ್‌ ಉತ್ಪಾದನೆಯ ಪ್ರಾರಂಭದಿಂದ ಕೊನೆಯವರೆಗೂ ಅದರ ಸಂಪೂರ್ಣ ನಿರ್ವಹಣೆಯ ಕುರಿತು ಪ್ಲಾಸ್ಟಿಕ್‌ ಉತ್ಪಾದಕರಿಗೆ ವಿಸ್ತೃತ ಹೊಣೆಗಾರಿಕೆಯನ್ನೂ ಸೂಚಿಸಲಾಗಿದ್ದು ಪ್ಲಾಸ್ಟಿಕ್‌ ವಸ್ತುಗಳಿಗೆ ಪರ್ಯಾಯಗಳನ್ನು ಕಂಡುಕೊಳ್ಳಲು ವಿವಿಧ ಉಪಕ್ರಮಗಳನ್ನು ಜಾರಿಗೊಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!