ಹೊಸದಿಗಂತ ಡಿಜಿಟಲ್ ಡೆಸ್ಕ್:
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಅವಧಿಯನ್ನು ವಿಸ್ತರಿಸುವಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಕರ್ನಾಟಕ ಹೈಕೋರ್ಟ್ ಮನ್ನಣೆ ನೀಡಿಲ್ಲ.
ಈ ವಿಷಯದಲ್ಲಿ ನಿರ್ಧಾರ ಕೈಗೊಳ್ಳುವ ಅಧಿಕಾರ ಚುನಾವಣಾ ಆಯೋಗಕ್ಕೇ ಸೇರಿದ್ದು, ಅಗತ್ಯವಿದ್ದರೆ ಆಯೋಗವೇ ಕಾಲಾವಕಾಶ ವಿಸ್ತರಿಸಬಹುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಆಯೋಗದ ಅಧಿಕಾರಕ್ಕೆ ಒತ್ತು
SIR ಅವಧಿಯನ್ನ ಒಂದರಿಂದ ಮೂರು ತಿಂಗಳವರೆಗೆ ವಿಸ್ತರಣೆ ಕೋರಿ ಸಾಹಿತಿ ದೇವನೂರು ಮಹಾದೇವ ಹಾಗೂ ಇತಿಹಾಸ ತಜ್ಞ ರಾಮಚಂದ್ರ ಗುಹಾ ಸೇರಿದಂತೆ ಇನ್ನಿತರರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಎಸ್‌ಐಆರ್ ಪ್ರಕ್ರಿಯೆ ಹಾಗೂ ಅದರ ಕಾಲಮಿತಿಗೆ ಸಂಬಂಧಿಸಿದ ತೀರ್ಮಾನ ಚುನಾವಣಾ ಆಯೋಗದ ವ್ಯಾಪ್ತಿಯದ್ದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿತು. ಮೊದಲು ಆಯೋಗದ ಮುಂದೆ ಮನವಿ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚನೆ ನೀಡಿದೆ.
ಇದನ್ನೂ ಓದಿ:
ಸುಪ್ರೀಂನಲ್ಲಿ ವಿಚಾರಣೆ ಮುಂದುವರಿಕೆ
ಎಸ್‌ಐಆರ್‌ಗೆ ಸಂಬಂಧಿಸಿದ ಕೆಲವು ವಿಚಾರಗಳು ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿರುವ ಕಾರಣ, ಈ ಹಂತದಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸುವುದು ಸೂಕ್ತವಲ್ಲ ಎಂದು ನ್ಯಾಯಪೀಠ ಹೇಳಿತು.
ಅರ್ಜಿದಾರರ ಆತಂಕ
ಪ್ರಕ್ರಿಯೆಗೆ ಕಡಿಮೆ ಕಾಲಾವಕಾಶ ನೀಡಿರುವುದರಿಂದ ಗ್ರಾಮೀಣ ಹಾಗೂ ಅನಕ್ಷರಸ್ಥ ಮತದಾರರಿಗೆ ತೊಂದರೆಯಾಗಬಹುದು ಎಂದು ಅರ್ಜಿದಾರರು ವಾದಿಸಿದ್ದರು. ಆದರೆ ಎಲ್ಲ ವಾದಗಳನ್ನು ಆಲಿಸಿದ ಬಳಿಕ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿತು.



