ಸಿರಗೂರು | ಅನಾರೋಗ್ಯಕ್ಕೆ ತುತ್ತಾಗಿ ನರಳುತ್ತಿದ್ದ ಹೆಣ್ಣಾನೆ ಚಿಕಿತ್ಸೆಗೆ ಸ್ಪಂದಿಸದೇ ಸಾವು

ಹೊಸದಿಗಂತ ವರದಿ, ಹಾಸನ:

ಅನಾರೋಗ್ಯದಿಂದ ಅಸ್ವಸ್ಥಗೊಂಡು ಬೇಲೂರು ತಾಲೂಕು ಸಿರಗೂರು ಗ್ರಾಮದ ತೋಟದ ಬಳಿ ಅನಾರೋಗ್ಯಕ್ಕೆ ತುತ್ತಾಗಿ ನರಳುತ್ತಿದ್ದ ಹೆಣ್ಣಾನೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಸಾವನ್ನಪ್ಪಿದೆ.

ಅನಾರೋಗ್ಯದಿಂದ ಮುಂದೆ ಹೆಜ್ಜೆ ಇಡಲಾಗದೇ ನಿಂತಲ್ಲಿಯೇ ಪರಿತಪಿಸುತ್ತ ಮೂಕ ವೇದನೆ ಅನುಭವಿಸುತ್ತಿದ್ದ ಹೆನ್ಣಾನೆ ಆಹಾರ, ನೀರು ಸೇವಿಸದೇ ನಿತ್ರಾಣ ಸ್ಥಿತಿಗೆ ತಲುಪಿತ್ತು. ಮೈಸೂರು ಮೃಗಾಲಯ, ನಾಗರಹೊಳೆಯಿಂದ ಆಗಮಿಸಿದ್ದ ಇಬ್ಬರು ವೈದ್ಯರು ಕುಮ್ಮಿ ಆನೆಗಳಾದ ಭೀಮ ಮತ್ತು ಮಹೇಂದ್ರನ ನೆರವಿನೊಂದಿಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಚಿಕಿತ್ಸೆಗೆ ಮುಂದಾದರು.

ಮೂತ್ರ ವಿಸರ್ಜಿಸುವ ಜಾಗದಲ್ಲಿ ಆನೆಗೆ ಕೊಳೆತ ಸ್ವರೂಪದ ಗಾಯಗಳಾಗಿ ಹುಳುಗಳು ತುಂಬಿಕೊ೦ಡಿದ್ದವು. ಆಳವಾದ ಗಾಯಗಳನ್ನು ಸ್ವಚ್ಛಗೊಳಿಸಿದ ವೈದ್ಯರ ತಂಡದವರು ಆನೆಯ ದೇಹದೊಳಗೆ ಗಟ್ಟಿಯಾಗಿದ್ದ ಲದ್ದಿಯನ್ನು ಹೊರತೆಗೆದು ಸತತ ಎರಡು ತಾಸುಗಳ ಕಾಲ ಚಿಕಿತ್ಸೆ ಮುಂದುವರಿಸಿದರಾದರೂ ಆನೆ ಯಾವುದಕ್ಕೂ ಸ್ಪಂದಿಸದೇ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಅರಿವಳಿಕೆ ಚುಚ್ಚುಮದ್ದು ನೀಡಿದ ತಕ್ಷಣವೇ ಆನೆ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದು, ಸಮಸ್ಯೆಯ ಬಗ್ಗೆ ತಿಳಿದುಕೊಂಡು ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದುದೇ ಘಟನೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಆನೆಯ ಕಳೆಬರವನ್ನು ಮಲಸಾವರ ಅರನ್ಯ ಪ್ರದೇಶಕ್ಕೆ ಸ್ಥಳಾಂತರಿಸಿ ಮರಣೋತ್ತರ ಪರೀಕ್ಷೆ ನಡೆಸಿ ಆನೆಯ ದೇಹದ ಕೆಲವು ಭಾಗಗಳ ಮಾದರಿಯನ್ನು ಪರೀಕ್ಷೆಗಾಗಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸ್ಥಳದಲ್ಲಿಯೇ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.

ಕಳೆದ ಮೂರು ದಿನಗಳಿಂದ ನಿಂತಲ್ಲಿಯೇ ನಿಂತು ಅನಾರೋಗ್ಯದಿಂದ ನರಳಾಡಿದ್ದ ಹೆಣ್ಣಾನೆ ಮೂಕ ಭಾಷೆಯಲ್ಲಿ ಸೊಂಡಿಲು ಹಾಗೂ ಮುಂದಿನ ಎಡಗಾಲನ್ನು ಹಿಂದೆ ಮುಂದೆ ಆಡಿಸುತ್ತಾ ನರಳುತ್ತಿತ್ತು. ಒಂದೆಡೆ ಅನಾರೋಗ್ಯ ಮತ್ತೊಂದೆಡೆ ಆಹಾರವಿಲ್ಲದೆ ತೀವ್ರ ನಿತ್ರಾಣಗೊಂಡಿದ್ದ ಹೆಣ್ಣಾನೆ ಬಗ್ಗೆ ಕಾಳಜಿ ತೋರುವಲ್ಲಿ ಅರಣ್ಯ ಇಲಾಖೆ ಉದಾಸೀನ ಮೆರೆದಿದೆ ಎಂದು ಆ ಭಾಗದ ಜನರು ಆರೋಪಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!