ಚುನಾವಣೆಯಲ್ಲಿ ಶ್ರೀರಾಮಮಂದಿರ ವಿಚಾರವನ್ನು ಬಿಜೆಪಿ ಬಳಸಿಕೊಂಡರೆ ತಪ್ಪೇನೂ ಇಲ್ಲ: ಪೇಜಾವರ ಶ್ರೀ

ಹೊಸದಿಗಂತ ವರದಿ, ದಾವಣಗೆರೆ:

ಲೋಕಸಭೆ ಚುನಾವಣೆಯಲ್ಲಿ ಅಯೋಧ್ಯೆ ಶ್ರೀರಾಮಮಂದಿರ ವಿಚಾರವನ್ನು ಬಿಜೆಪಿಯವರು ಬಳಸಿಕೊಂಡರೆ ತಪ್ಪೇನೂ ಇಲ್ಲ. ಶ್ರೀರಾಮ ಮಂದಿರ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯವರು ಕೆಲಸ ಮಾಡಿದ್ದಾರೆ ಎಂದು ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ರಾಮಮಂದಿರ ನಿರ್ಮಾಣಕ್ಕಾಗಿ ಶ್ರಮಪಟ್ಟಿದ್ದಾರೆ. ಹಾಗಾಗಿ ಚುನಾವಣೆಗೆ ಮಂದಿರ ವಿಚಾರವನ್ನು ಹೇಳಿಕೊಳ್ಳುವುದರಲ್ಲಿ ಯಾವುದೇ ತಪ್ಪೂ ಇಲ್ಲ. ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲು ಮಂದಿರ ನಿರ್ಮಾಣ ಕಾರ್ಯ ಒಂದು ಅವಕಾಶವಾಗಬಹುದು. ರಾಮ ಮಂದಿರದ ಶತಮಾನಗಳ ಕನಸು ಈಗ ನನಸಾಗಿದೆ. ಇನ್ನು ರಾಮರಾಜ್ಯವಾಗಲು ಶ್ರೀರಾಮನ ಅನುಗ್ರಹ ಬೇಕಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸೋಣ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯ ಈ ದೇಶದಲ್ಲಿ ಶ್ರೀರಾಮ ಮಂದಿರಕ್ಕೆ ಬಾಂಬ್ ಹಾಕುವ ಬೆದರಿಕೆ ಬಂದಿರುವುದು ಹೇಯ ಕೃತ್ಯ. ಯಾರೂ ಸಹ ಇಂತಹ ಕೃತ್ಯಕ್ಕೆ ಕೈ ಹಾಕಬಾರದು. ಸುಪ್ರೀಂ ಕೋರ್ಟ್ ತೀರ್ಪು, ನ್ಯಾಯಾಲಯದ ಮಾರ್ಗದರ್ಶನದಂತೆಯೇ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಸಾಗಿದೆ ಎಂದು ಅವರು ನುಡಿದರು.

ದೇವಸ್ಥಾನಗಳ ಕಾಣಿಕೆ ಹುಂಡಿಯ ಹಣದ ವಿಚಾರದಲ್ಲಿ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಹಸ್ತಕ್ಷೇಪ ಮಾಡಬಾರದು. ಅದರ ಜವಾಬ್ದಾರಿಯನ್ನು ಹಿಂದೂ ಸಮಾಜಕ್ಕೆ ಬಿಟ್ಟು ಕೊಡಬೇಕು. ಬೇರೆ ಮತದವರ ಧಾರ್ಮಿಕ ಕೇಂದ್ರಗಳಲ್ಲಿ ಸರ್ಕಾರವು ಹಸ್ತಕ್ಷೇಪ ಮಾಡುತ್ತಿಲ್ಲ. ಅದೇ ರೀತಿ ನಮ್ಮ ದೇವಸ್ಥಾನಗಳ ವಿಚಾರದಲ್ಲೂ ಹಸ್ತಕ್ಷೇಪ ಮಾಡಬಾರದು ಎಂದು ಅವರು ಸಲಹೆ ನೀಡಿದರು.

ಪ್ರತಿಯೊಂದನ್ನೂ ಪರೀಕ್ಷೆ ಮಾಡಿಯೇ, ನೀಡಲು ಸಾಧ್ಯವಾಗಲಿಕ್ಕಿಲ್ಲ. ರಾಜ್ಯದ ದೇವಸ್ಥಾನಗಳಲ್ಲಿ ಪ್ರಸಾದ ತಯಾರಿಸಲು ಮಾರ್ಗಸೂಚಿ ಬಿಡುಗಡೆ ಮಾಡಬೇಕು. ಇದೇ ಮಾತು ಹೊಟೆಲ್ ಇನ್ನಿತರೆ ಕಡೆಗಳಲ್ಲಿ ಸಾರ್ವಜನಿಕವಾಗಿ ವಿತರಣೆಯಾಗುವ ಸ್ಥಳಗಳಿಗೂ ಅನ್ವಯಿಸುತ್ತದೆ. ಅವುಗಳಿಗೂ ಮಾರ್ಗಸೂಚಿ ಮಾಡುವುದು ಉತ್ತಮ ಎಂದರಲ್ಲದೆ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ನಾವು ಸ್ವಾಗತಿಸುತ್ತೇವೆ ಎಂದು ಅವರು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!