ಹರಿಯಾಣ ಚುನಾವಣಾ ಅಖಾಡದಲ್ಲಿ ಸಹೋದರಿಯರ ಮುಖಾಮುಖಿ?

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಪ್ಯಾರಿಸ್​ ಒಲಿಂಪಿಕ್ಸ್ ಅನರ್ಹಗೊಂಡ ಬೇಸರದಲ್ಲಿ ಕುಸ್ತಿಗೆ ವಿದಾಯ ಹೇಳಿದ್ದ ವಿನೇಶ್‌ ಪೋಗಟ್‌ ಇದೀಗ ರಾಜಕೀಯಕ್ಕೆ ಎಂಟ್ರಿ ಕೊಡಲು ಸಿದ್ಧರಾಗಿದ್ದು, ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ .

ಆದರೆ, ಸಕ್ರಿಯ ರಾಜಕಾರಣಕ್ಕೆ ಬರುವುದಿಲ್ಲ ಎಂದು ವಿನೇಶ್ ಈ ಹಿಂದೆಯೇ ಹೇಳಿದ್ದರು. ಆದರೆ, ಇತ್ತೀಚಿನ ವರದಿಯ ಪ್ರಕಾರ, ಕೆಲವು ರಾಜಕೀಯ ಪಕ್ಷಗಳು ವಿನೇಶ್​ ಅವರನ್ನು ರಾಜಕೀಯಕ್ಕೆ ಬರುವಂತೆ ಮನವೊಲಿಸಲು ಪ್ರಯತ್ನಿಸುತ್ತಿವೆ ಎನ್ನಲಾಗಿದೆ.

ವಿನೇಶ್ ಯಾವ ಪಕ್ಷ ಸೇರಲಿದ್ದಾರೆ ಎಂಬುದು ಇನ್ನೂ ಖಚಿತವಾಗಿಲ್ಲವಾದರೂ, ಮೂಲಗಳ ಪ್ರಕಾರ ಅವರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎನ್ನಲಾಗಿದೆ. ವಿನೇಶ್​ ಪ್ಯಾರಿಸ್​ನಿಂದ ಭಾರತಕ್ಕೆ ಬಂದ ವೇಳೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಸಂಸದ ದೀಪೇಂದರ್ ಹೂಡಾ ಅವರು ಭರ್ಜರಿ ಸ್ವಾಗತ ಕೋರಿದ್ದರು. ಬಳಿಕ ತವರಿನಲ್ಲಿಯೂ ವಿನೇಶ್​ಗೆ ಹಲವು ಕಾಂಗ್ರೆಸ್​ ನಾಯಕರು ಮತ್ತು ರೈತ ನಾಯಕರು ಸನ್ಮಾನ ಮಾಡಿದ್ದರು.

ಮೂಲಗಳ ಪ್ರಕಾರ ಮಾಜಿ ಕಾಮನ್​ವೆಲ್ತ್​ ಗೇಮ್​ ಚಿನ್ನದ ಪದಕ ವಿಜೇತೆ, ಬಿಜೆಪಿ ಪಕ್ಷದ ಕಾರ್ಯಕರ್ತೆ ಬಬಿತಾ ಫೋಗಟ್ ವಿರುದ್ಧ ವಿನೇಶ್​ ಅವರು ಈ ಬಾರಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ.

ವಿನೇಶ್​ ಮತ್ತು ಬಬಿತಾ ಸಹೋದರಿಗಳಾಗಿದ್ದಾರೆ. ವಿನೇಶ್​ ಮಾತ್ರವಲ್ಲದೆ ಬಜರಂಗ್​ ಪೂನಿಯಾ ಕೂಡ ಕಾಂಗ್ರೆಸ್​ ಪಕ್ಷದಿಂದ ಚುನಾವಣೆಗೆ ನಿಲ್ಲುತ್ತಾರೆ ಎನ್ನಲಾಗಿದೆ.

90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಚುನಾವಣಾ ಆಯೋಗವು ಕಳೆದ ಶುಕ್ರವಾರ ಚುನಾವಣೆ ದಿನಾಂಕ ಘೋಷಣೆ ಮಾಡಿತ್ತು. ಅಕ್ಟೋಬರ್ 1ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಅಕ್ಟೋಬರ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ.

ಬ್ರಿಜ್​ ಭೂಷಣ್​ ವಿರುದ್ಧದ ಪ್ರತಿಭಟನೆ ವೇಳೆ ವಿನೇಶ್​ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದರು. ಅಲ್ಲದೆ ತಮಗೆ ನೀಡಿದ್ದ ಖೇಲ್​ ರತ್ನ ಮತ್ತು ಅರ್ಜುನ ಪ್ರಶಸ್ತಿಯನ್ನು ದೆಹಲಿಯ ಕರ್ತವ್ಯ ಪಥದಲ್ಲಿ ತ್ಯಜಿಸುವ ಮೂಲಕ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಬಳಿಕ ರಾಹುಲ್​ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಜತೆ ಕಾಣಿಸಿಕೊಂಡಿದ್ದರು. ಇದನೆಲ್ಲ ನೋಡುವಾಗ ಅವರು ಈ ಬಾರಿ ಕಾಂಗ್ರೆಸ್​ ಪಕ್ಷದಿಂದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!