ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರ ಪತ್ನಿ, ರಾಜ್ಯಸಭಾ ಸಂಸದೆ ಸುಧಾಮೂರ್ತಿ ಅವರು ರಕ್ಷಾಬಂಧನ ಹಬ್ಬದ ಶುಭಾಶಯ ಕೋರಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅವರ ಮಾತುಗಳಿಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದರು.
ವಿಡಿಯೋಗೆ ಬಂದ ವ್ಯತಿರಿಕ್ತ ಪ್ರತಿಕ್ರಿಯೆಗಳನ್ನು ನೋಡಿ ಸುಧಾಮೂರ್ತಿ ಅವರು ಸ್ಪಷ್ಟನೆ ನೀಡಿದ್ದಾರೆ. ನಾನು ರಕ್ಷಾಬಂಧನಲ್ಲಿ ಹಂಚಿಕೊಂಡಿರುವ ಕಥೆಯು ರಾಖಿ ಹಬ್ಬಕ್ಕೆ ಸಂಬಂಧಿಸಿದ ಅನೇಕ ಕಥೆಗಳಲ್ಲಿ ಒಂದಾಗಿದೆ. ರಕ್ಷಾಬಂಧನದ ಬಗ್ಗೆ ನಾನು ಕೇಳಿದ ಅನೇಕ ಕಥೆಗಳಲ್ಲಿ ಒಂದನ್ನು ಹೈಲೈಟ್ ಮಾಡುವುದು ನನ್ನ ಉದ್ದೇಶವಾಗಿತ್ತು. ರಾಖಿ ಹಬ್ಬ ಈ ಭೂಮಿಯ ಹಳೆಯ ಸಂಪ್ರದಾಯವಾಗಿದೆ. ನಾನೂ ಇದಕ್ಕೆ ಹೆಮ್ಮೆಪಡುತ್ತೇನೆ ಎಂದು ಹೇಳಿದ್ದಾರೆ.
ಸುಧಾಮೂರ್ತಿ ಅವರ ಸ್ಪಷ್ಟನೆಯ ಪೋಸ್ಟ್ ಅನ್ನು 4.5 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಹಾಗೂ 3000 ಲೈಕ್ಗಳನ್ನು ನೀಡಲಾಗಿದೆ. ಈ ಪೋಸ್ಟ್ ಕೂಡ ನೆಟ್ಟಿಗರಿಂದ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಮೇಡಂ ಹಾಗಿದ್ದಲ್ಲಿ ನೀವು ಆ ವಿಡಿಯೋ ಮತ್ತು ಟ್ವೀಟ್ ಅನ್ನು ಡಿಲೀಟ್ ಮಾಡಬೇಕು. ಏಕೆಂದರೆ ಆ ವಿಡಿಯೋದಲ್ಲಿ ರಾಖಿ ಸಂಪ್ರದಾಯವು ಕರ್ಣಾವತಿ ಮತ್ತು ಹುಮಾಯೂನ್ ಅವರ ನಕಲಿ ಕಥೆಯಿಂದ ಆರಂಭವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಆ ವಿಡಿಯೋದಲ್ಲಿ ಸುಧಾಮೂರ್ತಿ ಅವರು, ರಕ್ಷಾಬಂಧನಕ್ಕೆ ಶ್ರೀಮಂತ ಇತಿಹಾಸವಿದೆ. ರಾಣಿ ಕರ್ಣಾವತಿ ಆಪತ್ತಿನಲ್ಲಿದ್ದಾಗ ಅವಳು ಸಹೋದರತ್ವದ ಸಂಕೇತವಾಗಿ ರಾಜ ಹುಮಾಯೂನ್ಗೆ ದಾರವನ್ನು ಕಳುಹಿಸಿ ಅವನ ಸಹಾಯವನ್ನು ಕೇಳುತ್ತಾಳೆ. ಅಂದಿನಿಂದ ಈ ದಾರದ ಸಂಪ್ರದಾಯ ಪ್ರಾರಂಭವಾಯಿತು. ಅದು ಇಂದಿಗೂ ಮುಂದುವರಿದಿದೆ ಎಂದು ಹೇಳಿದ್ದರು.