ಹೊಸದಿಗಂತ ಡಿಜಿಟಲ್ ಡೆಸ್ಕ್
ಎಸ್ಯುವಿ ವಾಹನ ಹಾಗೂ ಟ್ರಾಕ್ಟರ್ ಮುಖಾಮುಖಿ ಡಿಕ್ಕಿಯಾಗಿ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಆರು ಮಂದಿ ಮೃತಪಟ್ಟು, ಮೂವರು ಗಾಯಗೊಂಡ ದುರಂತ ಘಟನೆ ಉತ್ತರಪ್ರದೇಶದ ಬಲರಾಂಪುರ ಸಮೀಪದ ತುಳಸಿಪುರ-ಬರ್ಹಿನಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಅಪಘಾತಕೀಡಾದ ಎಸ್ ಯುವಿಯಲ್ಲಿದ್ದವರು ಶುಕ್ರವಾರ ತಡರಾತ್ರಿ ಗಸಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಲಕ್ಷ್ಮಣಪುರದಿಂದ ಭಗವಾನ್ಪುರಕ್ಕೆ ಪ್ರಯಾಣಿಸುತ್ತಿದ್ದಾಗ ಗನ್ವಾರಿಯಾ ಟ್ರಿಸೆಕ್ಷನ್ ಬಳಿ ಅಪಘಾತ ಸಂಭವಿಸಿದೆ ಎಂದು ಬಲರಾಂಪುರ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್ ಸಕ್ಸೇನಾ ತಿಳಿಸಿದ್ದಾರೆ.
ಹಿಂಬದಿಯಿಂದ ಬರುತ್ತಿದ್ದ ಜೀಪ್ ಸಹ ಎಸ್ಯುವಿ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಬಸಂತ್ (32), ಅವರ ಪತ್ನಿ ಅಮೃತಾ (28), ಲಕ್ಷ್ಮಣ್ (40), ವಾಡಿ (35) ಮತ್ತು ಶಾದಾಬ್ (26) ಸ್ಥಳದಲ್ಲೇ ಮೃತಪಟ್ಟರೆ, ಅಂಕಿತ್ (13) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಗಾಯಗೊಂಡಿರುವ ಶಿವಪ್ರಸಾದ್ (52) ಹಾಗೂ ದುರ್ಗಾಪ್ರಸಾದ್ (26) ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಉಮೇಶ್ (13) ಎಂಬ ಹೆಸರಿನ ಮತ್ತೊಬ್ಬ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಲಕ್ನೋದ ಆಸ್ಪತ್ರೆಗೆ ದಾಖಲಿಸಲಾಗಿದೆ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ