Sunday, December 10, 2023

Latest Posts

ಬಿಗ್‌ ಸಂಡೆ, ಬಿಗ್‌ ಫೈಟ್:‌ ಭಾರತ-ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್‌ಗೆ ಭಾರೀ ಭದ್ರತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತ-ಆಸ್ಟ್ರೇಲಿಯಾ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಅಹಮದಾಬಾದ್ ಪೊಲೀಸರು ಭಾರೀ ಭದ್ರತೆಯನ್ನು ಏರ್ಪಡಿಸಿದ್ದಾರೆ. ಗುಜರಾತ್‌ನ ಅಹಮದಾಬಾದ್ ನಗರದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ಮಧ್ಯಾಹ್ನ ನಡೆಯಲಿರುವ ಫೈನಲ್ ಪಂದ್ಯಕ್ಕೆ 6 ಸಾವಿರ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಐಸಿಸಿ ಕ್ರಿಕೆಟ್ ವಿಶ್ವಕಪ್ ಗ್ರ್ಯಾಂಡ್ ಫಿನಾಲೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಉಪ ಪ್ರಧಾನಿ ರಿಚರ್ಡ್ ಮಾರ್ಲ್ಸ್ ಪಾಲ್ಗೊಳ್ಳಲಿರುವುದರಿಂದ ಭಾರೀ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ಅಹಮದಾಬಾದ್ ಪೊಲೀಸ್ ಆಯುಕ್ತ ಜಿಎಸ್ ಮಲಿಕ್ ಹೇಳಿದ್ದಾರೆ. ಅಹಮದಾಬಾದ್ ನಗರದಲ್ಲಿ ನಡೆಯುವ ಪಂದ್ಯಕ್ಕೆ ಲಕ್ಷಗಟ್ಟಲೆ ಪ್ರೇಕ್ಷಕರು ಮತ್ತು ಅನೇಕ ಸೆಲೆಬ್ರಿಟಿಗಳು ಪಾಲ್ಗೊಳ್ಳುವ ಕಾರಣ ಕ್ಷಿಪ್ರ ಕಾರ್ಯಾಚರಣೆ ಪಡೆ ಮತ್ತು ಗುಜರಾತ್ ಪೊಲೀಸರೊಂದಿಗೆ ವಿಸ್ತಾರವಾದ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.

ಕ್ರಿಕೆಟ್ ಮೈದಾನದಲ್ಲಿ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್

ಕ್ರಿಕೆಟ್ ಮೈದಾನದಲ್ಲಿ 3 ಸಾವಿರ ಜನರನ್ನು ನಿಯೋಜಿಸಲಾಗಿತ್ತು. ವಿವಿಐಪಿಗಳು ತಂಗಿರುವ ಹೋಟೆಲ್‌ಗಳು ಮತ್ತು ಅತಿಥಿ ಗೃಹಗಳಿಗೆ ಇನ್ನೂ 3,000 ಜನರನ್ನು ಭದ್ರತೆಗಾಗಿ ನೇಮಿಸಲಾಗಿದೆ. ಕ್ರಿಕೆಟ್ ಮೈದಾನದಲ್ಲಿ ತಾತ್ಕಾಲಿಕ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಬಾಂಬ್ ಪತ್ತೆ ಮತ್ತು ವಿಲೇವಾರಿ ಸ್ಕ್ವಾಡ್ 

ಐಜಿ, ಡಿಐಜಿ ಶ್ರೇಣಿಯ ನಾಲ್ವರು ಹಿರಿಯ ಐಪಿಎಸ್ ಅಧಿಕಾರಿಗಳು, 39 ಸಹಾಯಕ ಪೊಲೀಸ್ ಆಯುಕ್ತರು ಮತ್ತು 92 ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಭದ್ರತಾ ಕರ್ತವ್ಯದಲ್ಲಿರುತ್ತಾರೆ. ಪಂದ್ಯದ ಸಮಯದಲ್ಲಿ ಯಾವುದೇ ರಾಸಾಯನಿಕ, ಜೈವಿಕ, ವಿಕಿರಣಶಾಸ್ತ್ರ, ಪರಮಾಣು ತುರ್ತುಸ್ಥಿತಿಗೆ ಸ್ಪಂದಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಂಡಗಳನ್ನು ನಗರದಲ್ಲಿ ನಿಯೋಜಿಸಲಾಗಿದೆ.

ಬಾಂಬ್ ಪತ್ತೆ ಮತ್ತು ವಿಲೇವಾರಿ ದಳದ 10 ತಂಡ ಹಾಗೂ ಚೇತಕ್ ಕಮಾಂಡೋಗಳ ಎರಡು ತಂಡಗಳು ಕರ್ತವ್ಯವದಲ್ಲಿವೆ. ಭಾರತಕ್ಕೆ ಬೆದರಿಕೆ ಹಾಕಿದರೆ ಎದುರಿಸಲು ಸಿದ್ಧ ಎಂದು ಡಿಜಿಪಿ ಮಲಿಕ್ ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ, ಭಾರತದಲ್ಲಿರುವ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ, ಸಿಂಗಾಪುರದ ಗೃಹ ಸಚಿವ ಕೆ.ಷಣ್ಮುಗಂ, ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಮತ್ತಿತರರು ಈ ಕ್ರೀಡಾಂಗಣದಲ್ಲಿ ಅಂತಿಮ ಪಂದ್ಯಕ್ಕೆ ಆಗಮಿಸಲಿದ್ದಾರೆ. 1.32 ಲಕ್ಷ ಸಾಮರ್ಥ್ಯದ ಕ್ರೀಡಾಂಗಣದಲ್ಲಿ ಭಾನುವಾರ ಮಧ್ಯಾಹ್ನ 2 ಗಂಟೆಗೆ ಪಂದ್ಯ ಆರಂಭವಾಗಲಿದೆ. ಭಾರತೀಯ ವಾಯುಪಡೆಯ ಪ್ರಸಿದ್ಧ ಸೂರ್ಯ ಕಿರಣ್ ಏರೋಬ್ಯಾಟಿಕ್ಸ್ ತಂಡವು ಭಾನುವಾರದ ಪಂದ್ಯಕ್ಕೂ ಮುನ್ನ ಏರ್ ಶೋ ನಡೆಸಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!