ಕೌಶಲ್ಯಾಭಿವೃದ್ಧಿ ಅಕ್ರಮ: ಚಂದ್ರಬಾಬು ನಾಯ್ಡುಗೆ 14 ದಿನಗಳ ನ್ಯಾಯಾಂಗ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೌಶಲ್ಯಾಭಿವೃದ್ಧಿ ಅಕ್ರಮ ಆರೋಪ ಹೊತ್ತಿರುವ ಮಾಜಿ ಮುಖ್ಯಮಂತ್ರಿ ಹಾಗೂ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡುರನ್ನು ಎಸಿಬಿ ಕೋರ್ಟ್ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಎಸ್‌ಐಟಿ ವಾದವನ್ನು ಒಪ್ಪಿಕೊಂಡಿರುವ ಎಸಿಬಿ ನ್ಯಾಯಾಲಯವು ಕೌಶಲ್ಯಾಭಿವೃದ್ಧಿ ಪ್ರಕರಣದಲ್ಲಿ ಚಂದ್ರಬಾಬುಗೆ ಸೆ.22 ರ ವರೆಗೆ, ಅಂದರೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಇಂದು ರಾತ್ರಿ ಚಂದ್ರಬಾಬು ಅವರನ್ನು ಎಸ್‌ಐಟಿ ಕಚೇರಿಗೆ ಕರೆದೊಯ್ದು ಸೋಮವಾರ ಬೆಳಗ್ಗೆ ರಾಜಮಂಡ್ರಿ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಗುತ್ತದೆ.

ಇತ್ತ ತೆಲುಗು ದೇಶ ಪಾರ್ಟಿ ಮುಖ್ಯಸ್ಥನ ಬಂಧನ ಕಾರ್ಯಕರ್ತರು ಹಾಗೂ ನಾಯಕರನ್ನು ಕೆರಳಿಸಿದೆ. ಆಂಧ್ರ ಪ್ರದೇಶದಲ್ಲಿ ಪ್ರತಿಭಟನೆ ಜೋರಾಗಿದೆ.ಇದೀಗ ನ್ಯಾಯಂಗ ಬಂಧನ ಆದೇಶದ ಬಳಿಕ ಮತ್ತೆ ಪ್ರತಿಭಟನೆ ಹೆಚ್ಚಾಗಿದೆ.

2014ರಲ್ಲಿ ಚಂದ್ರಬಾಬು ನಾಯ್ಡು ಅವರು ಮುಖ್ಯಮಂತ್ರಿ ಆಗಿದ್ದಾಗ ಸೀಮನ್ಸ್‌ ಮತ್ತು ಡಿಸೈನ್‌ ಟೆಕ್‌ ಕಂಪನಿಗಳ ತಾಂತ್ರಿಕ ಸಹಯೋಗದಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ಆಂಧ್ರದ ವಿವಿಧೆಡೆ ಸ್ಥಾಪಿಸುವ ನಿರ್ಣಯ ಕೈಗೊಂಡಿದ್ದರು. ಇದು 3,300 ಕೋಟಿ ರು. ಯೋಜನೆ ಆಗಿತ್ತು. ಇದರಲ್ಲಿ ಶೇ.90ರಷ್ಟುಹಣವನ್ನು ಸೀಮನ್ಸ್‌ ಹಾಕಬೇಕಿತ್ತು.
ಬಾಕಿ ಶೇ.10ರಷ್ಟುತನ್ನ ಪಾಲಿನ ಹಣವಾದ 371 ಕೋಟಿ ರು.ಗಳನ್ನು ಸರ್ಕಾರ ನೀಡಿತ್ತು. ಆದರೆ ಸೀಮನ್ಸ್‌ ತನ್ನ ಪಾಲಿನ ಹಣವನ್ನೇ ಹಾಕಲಿಲ್ಲ. ಆದರೂ ಸರ್ಕಾರವು ತನ್ನ ಪಾಲಿನ 371 ಕೋಟಿ ರು.ನಲ್ಲಿ ಕೆಲವೇ ಕೆಲವು ಕೌಶಲ್ಯ ಕೇಂದ್ರಗಳನ್ನು ಸ್ಥಾಪಿಸಿತು. ಮಿಕ್ಕ ಕೇಂದ್ರಗಳನ್ನು ಸ್ಥಾಪಿಸದೇ ಕೇವಲ ಲೆಕ್ಕಪತ್ರದಲ್ಲಿ ‘ಸ್ಥಾಪಿಸಲಾಗಿದೆ’ ಎಂದು ತೋರಿಸಿ ಹಣವನ್ನು ನಕಲಿ ಕಂಪನಿಗಳಿಗೆ ವರ್ಗಾಯಿಸಿ ದುರುಪಯೋಗ ಮಾಡಿಕೊಂಡಿತ್ತು ಎನ್ನಲಾಗಿತ್ತು. ಚಂದ್ರಬಾಬು ನಾಯ್ಡು, ಅಂದಿನ ಟಿಡಿಪಿ ಅಧ್ಯಕ್ಷ ಟಿ. ಅಚ್ಚಂನಾಯ್ಡು ಮತ್ತು ಇತರ ಕೆಲವರು ಇದರ ಫಲಾನುಭವಿಗಳು ಎಂಬ ಆರೋಪ ಕೇಳಿಬಂದಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!