Wednesday, August 17, 2022

Latest Posts

ಶ್ರೀ ಜಯತೀರ್ಥರ ಮೂಲ ವೃಂದಾವನ ಬಗ್ಗೆ ಅಪಪ್ರಚಾರ: ಜಯತೀರ್ಥ ಭಕ್ತ ವೃಂದ ಪ್ರತಿಭಟನೆ

ಹೊಸದಿಗಂತ ವರದಿ, ಬಳ್ಳಾರಿ:
ಕಲಬುರ್ಗಿ ಜಿಲ್ಲೆಯ ಮಳಖೇಡ ಶ್ರೀ ಜಯತೀರ್ಥ ಗುರುಗಳ ಮೂಲ ವೃಂದಾವನದ ಕುರಿತು ರಾಯರ ಮಠದ ಭಕ್ತರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಇಲ್ಲಿನ ಶ್ರೀ ಜಯತೀರ್ಥ ಗುರುಗಳ ಭಕ್ತ ವೃಂದದವರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಸತ್ಯನಾರಾಯಣ ಪೇಟೆಯ ಶ್ರೀಮದುತ್ತರಾಧಿಮಠದ ಬಳಿ ಜಮಾಯಿಸಿದ ಜಯತೀರ್ಥ ಭಕ್ತ ವೃಂದದವರು, ಸಂಗಮ್ ವೃತ್ತ, ರಾಯಲ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿದರು. ಶ್ರೀಜಯತೀರ್ಥರ ನಾಮಸ್ಮರಣೆ ಹಾಗೂ ಅವರ ಹಾಡುಗಳನ್ನು ಪಠಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಮಳಖೇಡದ ಶ್ರೀ ಜಯತೀರ್ಥರ ವೃಂದಾವನವೇ ಮೂಲ ವೃಂದಾವನವಾಗಿದೆ ಎಂದು ಪ್ರತಿಪಾದಿಸಿದ ಭಕ್ತರು, ಈ ಕುರಿತು ಅಪಪ್ರಚಾರ ಮಾಡುತ್ತಿರುವವರ ವಿರುದ್ಧ  ಜಿಲ್ಲಾಧಿಕಾರಿಗಳವರ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಪತ್ರವನ್ನು ರವಾನಿಸಿದರು.
ನಂತರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಸಮಾವೇಶದಲ್ಲಿ ಶ್ರೀಮದುತ್ತರಾಧಿಮಠದ ಪಂ.ಪ್ರವೀಣ್ ಆಚಾರ್ ಹಾಗೂ ಪಂ.ನವೀನ್ ಆಚಾರ್ ಮಾತನಾಡಿ, ಮಳಖೇಡ ಶ್ರೀ ಜಯತೀರ್ಥರ ವೃಂದಾವನವೇ ಮೂಲ ವೃಂದಾವನವಾಗಿದೆ. ಆದರೆ ಕೆಲವರು ಗಂಗಾವತಿಯ ಆನೆಗುಂದಿಯ ನವ ವೃಂದಾವನದಲ್ಲಿ ಶ್ರೀ ಜಯತೀರ್ಥರ ಮೂಲ ವೃಂದಾವನವಿದೆ ಎಂದು ಹೇಳಿಕೆ ನೀಡುವ ಮೂಲಕ ಭಕ್ತರಲ್ಲಿ‌ ಅನಗತ್ಯ ಗೊಂದಲವನ್ನು ಉಂಟು ಮಾಡುತ್ತಿದ್ದಾರೆ, ಇದು ಭಕ್ತ ವೃಂದಕ್ಕೆ ಹಾಗೂ ಇಡೀ ಸಮುದಾಯಕ್ಕೆ ತಪ್ಪು ಸಂದೇಶ ರವಾನೆಮಾಡುತ್ತಿದೆ.
ಉತ್ತರಾಧಿಮಠದ ರಘುವರ್ಯ ತೀರ್ಥರ ವೃಂದಾವನವನ್ನೇ ಶ್ರೀ ಜಯತೀರ್ಥರ ವೃಂದಾವನ ಎಂದು ಅಪಪ್ರಚಾರ  ಮಾಡುವುದನ್ನು ತಡೆಗಟ್ಟುವ ಮೂಲಕ ಸಮಾಜದಲ್ಲಿ ಸಾಮರಸ್ಯವನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಈ ವರ್ಷದ ಆಷಾಡ ಮಾಸದಲ್ಲಿ 17, 18, 19 ರಂದು ಮೂರು ದಿನಗಳ ಕಾಲ ನವ ವೃಂದಾವನದಲ್ಲಿ ಶ್ರೀ ಜಯತೀರ್ಥರ ಆರಾಧನೆಯನ್ನು ವೈಭವವಾಗಿ ಆಚರಿಸಲಾಗುವುದು ಎಂದು ರಾಯರ ಮಠದವರು ಭಕ್ತರಿಗೆ ಕರೆ ನೀಡಿರುವುದು ಸರಿಯಲ್ಲ, ಇದು ಜಯತೀರ್ಥರ ಭಕ್ತ ವೃಂದಕ್ಕೆ ತೀವ್ರ ನೋವನ್ನುಂಟು ಮಾಡಿದೆ. ಕಳೆದ 600 ವರ್ಷಗಳ ಇತಿಹಾಸ ಇರುವ ಶ್ರೀ ಜಯತೀರ್ಥರ ಮೂಲ ವೃಂದಾವನ ಮಳಖೇಡದಲ್ಲೇ ಇತ್ತೆಂಬುದಕ್ಕೆ ಸಾಕಷ್ಟು ಇತಿಹಾಸವಿದೆ. ಹೀಗಿರುವಾಗ ಆನೆಗುಂದಿಯಲ್ಲೇ ಶ್ರೀ ಜಯತೀರ್ಥರ ಮೂಲ ವೃಂದಾವನವಿದೆ, ಅಲ್ಲಿಯೇ ಪ್ರಸಕ್ತ ವರ್ಷ ಆರಾಧನೆಯನ್ನು ವಿಜೃಂಭಣೆಯಿಂದ ಆಚರಿಸೋಣ ಎಂದು ಭಕ್ತರಿಗೆ ಕರೆ ನೀಡವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಶ್ರೀ ಜಯತೀರ್ಥ ಭಕ್ತರಾದ ಡಾ.ಶ್ರೀನಾಥ್, ಜಯತೀರ್ಥ ಆಚಾರ್, ಕರಣಂ ಶ್ರೀನಿವಾಸ್ ಆಚಾರ್, ಜಯಸಿಂಹ ಆಚಾರ್, ಸುಬ್ಬರಾವ್, ಎಸ್.ಕೆ.ಶ್ರೀಧರ್, ಎಸ್.ಕೆ.ಬದರಿ, ಬದರಿನಾಥ್, ಸುದರ್ಶನ್, ಗೊಪಿಕೃಷ್ಣ, ಶ್ರೀನಾಥ್ ಕಾಫಿಪುಡಿ, ಡಿ.ಗಿರಿ, ಬಿ.ವಿ.ಗಿರಿಶ್, ಅನಂತ ಪದ್ಮನಾಭ, ಅನಂತ ಕೃಷ್ಣ, ಅಶೋಕ್ ಕುಲಕರ್ಣಿ, ಪರಿಮಳಾ ಬಾಯಿ, ಚಂದ್ರಿಕಾ, ಸೌಭಾಗ್ಯ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!