ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸ್ಟೀವ್ ಸ್ಮಿತ್ ಹಾಗೂ ಅಲೆಕ್ಸ್ ಕ್ಯಾರಿ ಆಕರ್ಷಕ ಅರ್ಧಶತಕಗಳ ನೆರವಿನಿಂದ ಆಸ್ಟ್ರೇಲಿಯಾ ತಂಡವು 264 ರನ್ ಬಾರಿಸಿ ಸರ್ವಪತನ ಕಂಡಿದೆ. ಈ ಮೂಲಕ ಭಾರತಕ್ಕೆ ಚಾಂಪಿಯನ್ಸ್ ಟ್ರೋಫಿ ಫೈನಲ್‌ಗೇರಲು ಸವಾಲಿನ ಗುರಿ ನೀಡಿದೆ.
ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡವು ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ಆದರೆ ಉತ್ತಮ ಆರಂಭ ಪಡೆಯಲು ಕಾಂಗರೂ ಪಡೆ ವಿಫಲವಾಯಿತು. ಕೂಪರ್ ಕಾನ್ನೊಲ್ಲೆ 9 ಎಸೆತಗಳನ್ನು ಎದುರಿಸಿ ಶೂನ್ಯ ಸುತ್ತಿ ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಎರಡನೇ ವಿಕೆಟ್‌ಗೆ ಟ್ರ್ಯಾವಿಸ್ ಹೆಡ್ ಹಾಗೂ ಸ್ಟೀವ್ ಸ್ಮಿತ್ 50 ರನ್‌ಗಳ ಜತೆಯಾಟವಾಡಿದರು.
ಕೇವಲ 33 ಎಸೆತಗಳಲ್ಲಿ 39 ರನ್ ಬಾರಿಸಿ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದ್ದ ಟ್ರ್ಯಾವಿಸ್ ಹೆಡ್ ಅವರನ್ನು ಬಲಿಪಡೆಯುವಲ್ಲಿ ವರುಣ್ ಚಕ್ರವರ್ತಿ ಯಶಸ್ವಿಯಾದರು. ಲಬುಶೇನ್ 29 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಟೀಂ ಇಂಡಿಯಾ ಎದುರು ಐಸಿಸಿ ಟೂರ್ನಿಯಲ್ಲಿ ಯಾವಾಗಲೂ ಕಾಡುವ ಸ್ಟೀವ್ ಸ್ಮಿತ್ ಮತ್ತೊಮ್ಮೆ ಅರ್ಧಶತಕ ಸಿಡಿಸುವ ಮೂಲಕ ಟೀಂ ಇಂಡಿಯಾ ಬೌಲರ್‌ಗಳನ್ನು ಕಾಡಿದರು. ಸ್ಮಿತ್ 96 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 73 ರನ್ ಗಳಿಸಿ ಮೊಹಮ್ಮದ್ ಶಮಿ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.
ಇನ್ನು ಕೆಳ ಕ್ರಮಾಂಕದಲ್ಲಿ ಅಲೆಕ್ಸ್ ಕ್ಯಾರಿ ಸ್ಪೋಟಕ ಅರ್ಧಶತಕ ಸಿಡಿಸುವ ಮೂಲಕ ತಂಡದ ಮೊತ್ತವನ್ನು 240ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಚುರುಕಿನ ಬ್ಯಾಟಿಂಗ್ ನಡೆಸಿದ ಕ್ಯಾರಿ 57 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 61 ರನ್ ಗಳಿಸಿ ರನೌಟ್ ಆಗಿ ಪೆವಿಲಿಯನ್ ಸೇರಿದರು.
ಶಮಿ 10 ಓವರ್‌ನಲ್ಲಿ 48 ರನ್ ನೀಡಿ ಪ್ರಮುಖ ಮೂರು ವಿಕೆಟ್ ಪಡೆದರು. ಇನ್ನು ವರುಣ್ ಚಕ್ರವರ್ತಿ ಹಾಗೂ ರವೀಂದ್ರ ಜಡೇಜಾ ತಲಾ 2 ಹಾಗೂ ಹಾರ್ದಿಕ್ ಪಾಂಡ್ಯ ಮತ್ತು ಅಕ್ಷರ್ ಪಟೇಲ್ ತಲಾ ಒಂದೊಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.