ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಮಾನಯಾನ ಸಂದರ್ಭದಲ್ಲಿ ಅಸಭ್ಯ ವರ್ತನೆ, ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುತ್ತಿರುವ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ ಇದರ ನಡುವೆ ಇದೀಗ ಅಸ್ಸಾಂನಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಸಿಗರೇಟ್ ಸೇದುವ ಮೂಲಕ ಎಲ್ಲ ಪ್ರಯಾಣಿಕರ ಜೀವದೊಂದಿಗೆ ಆಟವಾಡಿದ್ದಾನೆ.
ಹೌದು, ನಿನ್ನೆ ರಾತ್ರಿ ವೇಳೆ 1.30ಕ್ಕೆ ಅಸ್ಸಾಂನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ 6E 716 ಇಂಡಿಗೂ ವಿಮಾನದಲ್ಲಿ ಅಸ್ಸಾಂ ಮೂಲದ ಶೇಹರಿ ಚೌಧರಿ ಎಂಬ ಪ್ರಯಾಣಿಕ ಧೂಮಪಾನ ಮಾಡುವ ಮೂಲಕ ಎಲ್ಲರ ಪ್ರಾಣಕ್ಕೆ ಕುತ್ತು ತಂದವನಾಗಿದ್ದಾನೆ.
ಈತ ವಿಮಾನದಲ್ಲಿ ಪ್ರಯಾಣ ಮಾಡುವ ವೇಳೆ ಶೌಚಾಲಯಕ್ಕೆ ತೆರಳಿದ್ದಾನೆ. ಅಲ್ಲಿ ಬಾಗಿಲು ಮುಚ್ಚಿಕೊಂಡು ಸಿಗರೇಟ್ ಸೇದಲು ಆರಂಭಿಸಿದ್ದಾರೆ. ವಿಮಾನದ ಶೌಚಾಲಯದಲ್ಲಿ ಹೊಗೆ ಮತ್ತು ವಾಸನೆ ಬಂದ ಹಿನ್ನೆಲೆಯಲ್ಲಿ ಸಿಬ್ಬಂದಿ ಕೂಡಲೇ ಎಲ್ಲ ಪ್ರಯಾಣಿಕರನ್ನು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಪ್ರಯಾಣಿಕ ಶೇಹರಿ ಚೌಧರಿ ಸಿಗರೇಟ್ ಸೇದಿರುವುದು ಬೆಳಕಿಗೆ ಬಂದಿದೆ.
ಇನ್ನು ಹವಾನಿಯಂತ್ರಿತ ವಿಮಾನದಲ್ಲಿ ಸ್ವಲ್ಪ ಬೆಂಕಿಯ ಜ್ವಾಲೆ ಕಂಡುಬಂದರೂ ಇಡೀ ವಿಮಾನವೇ ಕ್ಷಣಾರ್ಧದಲ್ಲಿ ಧಗಧಗಿಸಿ ಉರಿದು ಹೋಗುತ್ತದೆ. ಇಂತಹ ಆತಂಕದ ನಡುವೆಯೂ ಈ ವ್ಯಕ್ತಿ ಎಲ್ಲರ ಪ್ರಾಣದೊಂದಿಗೆ ಆಟವಾಡಿದ್ದಾನೆ. ಏರ್‌ಲೈನ್ಸ್ ಸಿಬ್ಬಂದಿ ಈತನನ್ನು ಪರಿಶೀಲನೆ ಮಾಡಿ ಪತ್ತೆಹಚ್ಚಿದ್ದು, ಆತನನ್ನು ಭದ್ರತಾಪಡೆ ಸಿಬ್ಬಂದಿಗೆ ಒಪ್ಪಿಸಿದ್ದಾರೆ. ಏರ್‌ಪೋರ್ಟ್ ಪೊಲೀಸರಿಂದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 336 (ಮಾನವ ಜೀವಕ್ಕೆ ಅಥವಾ ಇತರರ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಯಾವುದೇ ಕಾರ್ಯವನ್ನು ದುಡುಕಿನ ಅಥವಾ ನಿರ್ಲಕ್ಷ್ಯದಿಂದ ಮಾಡಿದವರು) ಮತ್ತು ಏರ್‌ಕ್ರಾಫ್ಟ್ ಕಾಯ್ದೆ 1937, 22 (ಪೈಲಟ್-ಇನ್-ಕಮಾಂಡ್ ನೀಡಿದ ಕಾನೂನುಬದ್ಧ ಸೂಚನೆಯನ್ನು ಅನುಸರಿಸಲು ನಿರಾಕರಿಸಿ), 23 (ಆಕ್ರಮಣ ಮತ್ತು ಇತರ ಕ್ರಿಯೆಗಳು ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತದೆ ಅಥವಾ ಉತ್ತಮ ಕ್ರಮ ಮತ್ತು ಶಿಸ್ತಿಗೆ ಅಪಾಯವನ್ನುಂಟುಮಾಡುತ್ತದೆ) ಮತ್ತು 25 (ಧೂಮಪಾನಕ್ಕಾಗಿ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.