Tuesday, August 16, 2022

Latest Posts

ಕೋಮು ಸಂಘರ್ಷಕ್ಕೆ ಬಲಿಯಾಗಿದ್ದ ಸ್ಮೃತೀಶ್… ದೇಶಪ್ರೇಮಿಗಳ ಹೃದಯದಲ್ಲಿ ಆತನ ಸ್ಥಾನ ಶಾಶ್ವತ ಎಂದಿದ್ದರು ಗಾಂಧಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ (ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ವಿಶೇಷ)
ಸ್ಮೃತೀಶ್ ಬಂಡೋಪಾಧ್ಯಾಯ (1910-1947), ಉತ್ತರಪಾರದ ಶ್ಯಾಮದಾಸ್ ಬಂಡೋಪಾಧ್ಯಾಯರ ಪುತ್ರ. 1947ರ ಸೆಪ್ಟೆಂಬರ್ 3ರಂದು ಹೂಗ್ಲಿ, ಪಶ್ಚಿಮ ಬಂಗಾಳ, ಕಲ್ಕತ್ತಾದ ಪಾರ್ಕ್ ಸರ್ಕಸ್ ಪ್ರದೇಶದಲ್ಲಿ ಸಂಭವಿಸಿದ್ದ ಕೋಮು ಸಂಘರ್ಷದಲ್ಲಿ ಆಕ್ರಮಣಕಾರರ ದಾಳಿಗೆ ಸಿಲುಕಿ ಹುತಾತ್ಮರಾದರು.
ಮರುದಿನ ಮಹಾತ್ಮಾ ಗಾಂಧಿಯವರು ಸ್ಮೃತೀಶ್ ರ ತಂದೆಗೆ ಹೀಗೆ ಬರೆದರು, “ಸಹೋದರ.. ಶ್ಯಾಮದಾಸ್, ಜಗತ್ತಿನ ಮಹಾತ್ಮರು  ನಿಮ್ಮ ಮಗನಂತೆ ವೀರತ್ವದಿಂದ ಸಾಯಲು ಬಯಸುತ್ತಾರೆ. ಆ ಒಂದು ಸಾವು ದೇಶದಲ್ಲಿ ಸಾವಿರಾರು ಹುತಾತ್ಮರು ಉದಯಿಸಲು ಸಹಾಯ ಮಾಡುತ್ತದೆ. ನಿಮ್ಮಂತೆ ನಾವೂ ಕೂಡ ನಿಮ್ಮ ಮಗನ ಹೆಸರನ್ನು ನೆನಪಿಸಿಕೊಳ್ಳಲು ಹೆಮ್ಮೆ ಪಡುತ್ತೇವೆ. ಅವನು ನಿಜವಾಗಿಯೂ ಸತ್ತಿಲ್ಲ; ಅವರ ತ್ಯಾಗದ ಸ್ಮರಣೆಯನ್ನು ದೇಶಪ್ರೇಮಿಗಳು ತಮ್ಮ ಹೃದಯದಲ್ಲಿ ಶಾಶ್ವತವಾಗಿ ಪಾಲಿಸುತ್ತಾರೆ ಎಂದು ಬರೆದಿದ್ದರು.
ಸ್ಮೃತೀಶ್‌ ರ ತಂದೆಯೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡು ಬ್ರಿಟಿಷ್ ಸೇವೆಗೆ ರಾಜೀನಾಮೆ ನೀಡಿದ್ದರು. ತಂದೆಯ ಹೋರಾಟಗಳು ಸೃತೀಶ್‌ ರ ಮೇಲೆ ಬಾಲ್ಯದಲ್ಲೇ ಪ್ರಭಾವ ಬೀರಿತ್ತು. ಕ್ರಾಂತಿಕಾರಿ ನಾಯಕ ಅಮರೇಂದ್ರನಾಥ ಚಟ್ಟೋಪಾಧ್ಯಾಯ ಅವರು ಸೃತೀಶ್‌ ರ ಸ್ವಾತಂತ್ರ್ಯ ಹೋರಾಟಗಳಿಗೆ ಮಾರ್ಗದರ್ಶನ ನೀಡಿದರು. ಅವರ ರಾಜಕೀಯ ಚಟುವಟಿಕೆಗಳು ಅರಂಬಾಗ್ ಸತ್ಯಾಗ್ರಹದಿಂದ ಪ್ರಾರಂಭವಾಯಿತು. ಹಾಗೂ ಅದಕ್ಕಾಗಿ ಜೈಲಿಗೆ ಹೋದರು (4 ಜುಲೈ 1930). ಆ ಬಳಿಕ‌ ಸ್ಮೃತೀಶ್ ಹೂಗ್ಲಿಯಲ್ಲಿ ರೈತ ಚಳವಳಿಯ ಪ್ರವರ್ತಕರಾಗಿ, ರೈತರನ್ನು ಚಳುವಳಿಗಳಿಗೆ ಸಜ್ಜುಗೊಳಿಸುವ ಮೂಲಕ ಬಂಗಾಳದಲ್ಲಿ ಕೃಷಿ ಕಾಲುವೆಗಳು ಮತ್ತು ಸ್ಲೂಸ್ ಗೇಟ್‌ಗಳನ್ನು ನವೀಕರಣವಾಗುವಲ್ಲಿ ಪ್ರಮುಖ ಪಾತ್ರವಹಿಸಿದರು. 1934-42ರ ಅವಧಿಯಲ್ಲಿ, ಅವರು ಹಲವಾರು ಬಾರಿ ಬ್ರಿಟೀಷರಿಂದ ಬಂಧಿಸಲ್ಪಟ್ಟಿದ್ದರು. ಮತ್ತು ಆ ವರ್ಷಗಳಲ್ಲಿ ಹೆಚ್ಚಿನ ಸಮಯವನ್ನು ಬಂಗಾಳದ ವಿವಿಧ ಜೈಲುಗಳಲ್ಲಿ ಕಳೆದರು.
ಅವರು ಉತ್ತರಪಾರದ ಹಳ್ಳಿಗಳಲ್ಲಿ ರಾತ್ರಿ ಶಾಲೆಗಳನ್ನು ಸ್ಥಾಪಿಸಿದರು. ಅದೇ ಸಂದರ್ಭದಲ್ಲಿ ಸಮಕಾಲೀನ ಬಂಗಾಳದ ಪ್ರಮುಖ ಕಲಾವಿದರ ಸಹಯೋಗದಲ್ಲಿ ರಾಷ್ಟ್ರೀಯ ಕಲಾ ಪ್ರದರ್ಶನವನ್ನು ಆಯೋಜಿಸಿದ್ದು ಅವರ ದೊಡ್ಡ ಸಾಧನೆಯಾಗಿದೆ. ಈ ಕಲಾ ಪ್ರದರ್ಶನದಲ್ಲಿ, ಪಲಾಶಿ ಕದನದಿಂದ ಪ್ರಾರಂಭಿಸಿ ಬಂಗಾಳದಲ್ಲಿ ಕೋಮು ಶಾಂತಿಗಾಗಿ ಗಾಂಧಿಯವರ ಸತ್ಯಾಗ್ರಹ, ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಭಾರತದ ಜನರು ನಡೆಸಿದ ಪ್ರತಿಭಟನಾ ಚಳವಳಿಯ ಇತಿಹಾಸವನ್ನು ಕಲೆಯ ರೂಪದಲ್ಲಿ ಅನಾವರಣಗೊಳಿಸಲಾಗಿತ್ತು. ಮುಂಬೈ, ದೆಹಲಿ ಮತ್ತು ಇಂದೋರ್‌ನಲ್ಲಿಯೂ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ದುರಾದೃಷ್ಟವಶಾತ್‌, ಸ್ವಾತಂತ್ರ್ಯ ಸಿಕ್ಕ ಕೆಲವೇ ದಿನಗಳಲ್ಲಿ ಸಂಭವಿಸಿದ  ಬಂಗಾಳದಲ್ಲಿ ಕೋಮು ಸಂಘರ್ಷ ತಡೆಗೆ ಯತ್ನಿಸಿದ್ದ ಸ್ಮೃತೀಶ್ ಕೋಮುದಾಳಿಗೆ ಬಲಿಯಾಗಬೇಕಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss