ಸದ್ಗುರು ಕೈಯಲ್ಲಿ ಹಿಡಿದಿದ್ದ ಹಾವಿಗೆ ಪ್ರೀತಿಯ ಉಪಚಾರ, ಯಾವುದೇ ಹಾನಿಯಾಗಿಲ್ಲ: ಈಶಾ ಫೌಂಡೇಶನ್ ಸ್ಪಷ್ಟನೆ

ಹೊಸದಿಗಂತ ವರದಿ,ಚಿಕ್ಕಬಳ್ಳಾಪುರ:

ಸದ್ಗುರು ಕೈಯಲ್ಲಿ ಹಿಡಿದಿದ್ದ ಹಾವು, ಸದ್ಗುರುಗಳಿಂದ ಪ್ರೀತಿಯ ಉಪಚಾರ, ಯಾವುದೇ ಹಾನಿಯಾಗದಂತೆ ಕಾಡಿಗೆ ಬಿಡುಗಡೆ ಮಾಡಲಾಗಿದೆ ಎಂದು ಈಶಾ ಫೌಂಡೇಶನ್ ಸ್ಪಷ್ಟನೆ ನೀಡಿದೆ.

ಇತ್ತೀಚೆಗೆ ಈಶಾ ಯೋಗ ಕೇಂದ್ರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸದ್ಗುರು ಹಾವನ್ನು ನಿರ್ವಹಿಸಿದ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾ ಅರಣ್ಯಾಧಿಕಾರಿಗಳಿಗೆ ದೂರು ನೀಡಿಲಾಗಿತ್ತು.

ಇತ್ತೀಚೆಗೆ ನಡೆದ ನಾಗಮಂಟಪ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಜಗ್ಗಿ ವಾಸುದೇವ್ ಅವರು ಜೀವಂತ ಹಾವನ್ನು ಹಿಡಿದು ಸಾರ್ವಜನಿಕವಾಗಿ ಪ್ರದರ್ಶನ ಮಾಡಿದ್ದರು. ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದು ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವಂತೆ ಎಸ್‌ಪಿಸಿಎ ಸಂಸ್ಥೆ ಸದಸ್ಯ ಹಾಗೂ ಉರಗರಕ್ಷಕ ಪೃಥ್ವಿರಾಜ್ ಚಿಕ್ಕಬಳ್ಳಾಪುರ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಅವರಿಗೆ ದೂರು ನೀಡಿದ್ದರು.

ವನ್ಯಜೀವಿಗಳನ್ನು ಹಿಡಿದು ಸಾರ್ವಜನಿಕ ವೇದಿಕೆಗಳಲ್ಲಿ ಪ್ರದರ್ಶನ ಮಾಡುವುದು `ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಸ್ಪಷ್ಟ ಉಲ್ಲಂಘನೆ ಆಗುತ್ತದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

ಇದಕ್ಕೆ ಸ್ಪಷ್ಟನೆ ನೀಡಿರುವ ಈಶಾ ಫೌಂಡೇಶನ್, ಅಕ್ಟೋಬರ್ 9 ರಂದು ಚಿಕ್ಕಬಳ್ಳಾಪುರದ ಈಶಾ ಯೋಗ ಕೇಂದ್ರದಲ್ಲಿ ನಾಗ ಪ್ರತಿಷ್ಠೆ ಕಾರ್ಯಕ್ರಮದ ವೇಳೆ ಹಾವೊಂದು ತಾನಾಗಿಯೇ ಕಾಣಿಸಿಕೊಂಡಿತ್ತು. ಹಾವಿನ ಮತ್ತು ಕೇಂದ್ರದಲ್ಲಿರುವ ಜನರ ಸುರಕ್ಷತೆಗಾಗಿ ಸ್ವಯಂಸೇವಕರೊಬ್ಬರು ಅದನ್ನು ಸದ್ಗುರುಗಳ ಗಮನಕ್ಕೆ ತಂದರು.

ಸದ್ಗುರು ಅದನ್ನು ಸೌಮ್ಯವಾಗಿ ನೋಡಿಕೊಂಡರು ಮತ್ತು ನಂತರ ಅದನ್ನು ಹತ್ತಿರದ ಕಾಡಿನಲ್ಲಿ ಸುರಕ್ಷಿತವಾಗಿ ಬಿಡುವಂತೆ ಹೇಳಿದರು. ಹಾವಿಗೆ ಯಾವುದೇ ರೀತಿಯ ಅಪಾಯವಾಗಿಲ್ಲ. ಈ ಘಟನೆಯ ಬಗ್ಗೆ ಸ್ಥಳದಲ್ಲಿದ್ದ ಪೊಲೀಸರಿಗೆ ಅರಿವಿತ್ತು.

ಹಾವುಗಳ ಕುರಿತಾದ ತಪ್ಪು ಕಲ್ಪನೆಗಳನ್ನು ತೊಡೆದುಹಾಕಲು ಮತ್ತು ಅವುಗಳ ಸಂರಕ್ಷಣೆಯನ್ನು ಉತ್ತೇಜಿಸಲು, ಸದ್ಗುರುಗಳು ಹಾವು ಸೌಮ್ಯ ಜೀವಿ ಮತ್ತು ಅದನ್ನು ನೋಯಿಸಬಾರದು ಎಂದು ಸಮಾರಂಭದಲ್ಲಿ ಪ್ರಸ್ತಾಪಿಸಿದರು. ಹಾವುಗಳನ್ನು ಅನವಶ್ಯಕವಾಗಿ ನಕಾರಾತ್ಮಕವಾಗಿ ನೋಡಲಾಗುತ್ತದೆ, ಆದರೆ ನಾವು ದಾಳಿ ಮಾಡಿದ ಹೊರತು ಅವು ನಮಗೆ ಹಾನಿಯುಂಟುಮಾಡುವುದಿಲ್ಲ, ಏಕೆಂದರೆ ಮನುಷ್ಯ ಅದರ ಆಹಾರವಲ್ಲ ಎಂದು ಸದ್ಗುರುಗಳು ನೆರೆದವರಿಗೆ ಮನವರಿಕೆ ಮಾಡಿಸಿದರು ಎಂದು ತಿಳಿಸಿದ್ದಾರೆ.

ವಾಹನ ಅಪಘಾತಗಳಂತಹ ಇತರ ಕಾರಣಗಳಿಂದ ಸಾಯುವವರಿಗಿಂತ ಹಾವು ಕಡಿತದಿಂದ ಸಾಯುವವರ ಸಂಖ್ಯೆ ತುಂಬಾ ಕಡಿಮೆ, ಆದರೂ ಜನರಿಗೆ ಹಾವಿನ ಬಗ್ಗೆ ತುಂಬಾ ಭೀತಿಯಿದೆ, ಇದು ಅನಗತ್ಯವಾದುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!