ಶಿವಾಜಿ ಅಫ್ಜಲನನ್ನು ಕೊಲ್ಲಲು ಬಳಸಿದ ವ್ಯಾಘ್ರನಖ ಲಂಡನ್ ಮ್ಯೂಸಿಯಂನಿಂದ ವಾಪಾಸ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಿವಾಜಿ ಮಹಾರಾಜರ ವೀರಚರಿತೆಯಲ್ಲಿ ಭಾರತೀಯರ ಮನೋಭಿತ್ತಿಯನ್ನು ಬಹುವಾಗಿ ಆವರಿಸಿಕೊಂಡಿರುವ ಒಂದು ಅಧ್ಯಾಯ ಎಂದರೆ, ಬಿಜಾಪುರ ಸುಲ್ತಾನರ ಕಮಾಂಡರ್ ಅಫ್ಜಲ ಖಾನನನ್ನು ಶಿವಾಜಿ ವ್ಯಾಘ್ರ ನಖವೆಂಬ ಆಯುಧ ಉಪಯೋಗಿಸಿ ಕೊಂದದ್ದು. ಹುಲಿಯ ಉಗುರುಗಳ ವಿನ್ಯಾಸದಲ್ಲಿ ಮಾಡಿದ ಆಯುಧ ಇದಾಗಿರುವುದರಿಂದ ಆ ಹೆಸರು.

ಇದೀಗ ಹಲವು ಮಾಧ್ಯಮ ವೇದಿಕೆಗಳಲ್ಲಿ ವರದಿಯಾಗುತ್ತಿರುವಂತೆ ಲಂಡನ್‌ನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನಲ್ಲಿದ್ದ ವಾಘ್ ನಖ್ ಅರ್ಥಾತ್ ವ್ಯಾಘ್ರನಖ ಆಯುಧವನ್ನು ಭಾರತಕ್ಕೆ ಹಿಂದಿರುಗಿಸಲು ಯುನೈಟೆಡ್ ಕಿಂಗ್‌ಡಮ್ ಒಪ್ಪಿಕೊಂಡಿದೆ.

ಎಲ್ಲವೂ ಅಂದುಕೊಂಡಂತೆಯೇ ನಡೆದರೆ ಇದೇ ವರ್ಷದಲ್ಲಿ ವಾಘ್ ನಾಕ್ ಭಾರತಕ್ಕೆ ಆಗಮಿಸಲಿದೆ. 1669ರಲ್ಲಿ ಬಿಜಾಪುರ ಸುಲ್ತಾನರ ಸೇನಾಪತಿಯಾದ ಅಫ್ಜಲ್ ಖಾನ್‌ನನ್ನು ಹತ್ಯೆ ಮಾಡಲು ಛತ್ರಪತಿ ಶಿವಾಜಿ ಮಹಾರಾಜರು ಬಳಸಿದ್ದ ವಾಘ್ ನಾಕ್ (ಹುಲಿಯ ಉಗುರು)ನ್ನು ಗೌರವಯುತವಾಗಿ ಹಿಂದಿರುಗಿಸಲು ಯುಕೆ ಸರ್ಕಾರ ನಿರ್ಧರಿಸಿದೆ.

ಮಹಾರಾಷ್ಟ್ರ ರಾಜ್ಯದ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸುಧೀರ್ ಮುಂಗಂಟಿವಾರ್ ಈ ತಿಂಗಳ ಕೊನೆಯಲ್ಲಿ ಲಂಡನ್‌ಗೆ ಭೇಟಿ ನೀಡಲಿದ್ದು, ಈ ಆಯುಧವನ್ನು ವಾಪಸ್ ತರುವ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ.

“ವಾಘ್ ನಖ್ ಹಿಂದಿರುಗಿಸಲು ಸಿದ್ಧರಿದ್ದೇವೆ ಎಂದು ಯುಕೆ ಅಧಿಕಾರಿಗಳಿಂದ ದೃಢೀಕರಣ ಸ್ವೀಕರಿಸಿದ್ದೇವೆ. ಶಿವಾಜಿ ಮಹಾರಾಜರು ಅಫ್ಜಲ್ ಖಾನ್‌ನ್ನು ಕೊಂದ ವಾರ್ಷಿಕೋತ್ಸವ ಸಂದರ್ಭದಲ್ಲಿ ವಾಘ್‌ ನಖ್ ಅನ್ನು ಮರಳಿ ತರುವ ಪ್ರಯತ್ನ ಮಾಡುತ್ತೇವೆ.” ಎಂದು ಸಚಿವರು ಹೇಳಿದ್ದಾರೆ.

ವಾಘ್‌ನಕ್: ಐತಿಹಾಸಿಕ ಸಂಪತ್ತು
ವಾಘ್ ನಖ್ ಬಗ್ಗೆ ಸಚಿವರ ವಿವರಣೆ ಹೀಗಿದೆ- ಛತ್ರಪತಿ ಶಿವಾಜಿ ಮಹಾರಾಜರ ವಾಘ್‌ನಖ್ ಐತಿಹಾಸಿಕ ಸಂಪತ್ತಾಗಿದೆ. ಈ ಕಲಾಕೃತಿ ಅಪಾರ ಪ್ರಾಮುಖ್ಯತೆಯನ್ನು ಹೊಂದಿದ್ದು, ಮಹಾರಾಷ್ಟ್ರದ ಇತಿಹಾಸದಲ್ಲಿ ಇದೊಂದು ಪ್ರಮುಖ ಘಟನೆಯನ್ನು ಸಂಕೇತಿಸುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್ ಅನ್ವಯ ನವೆಂಬರ್ 10 ರಂದು ಶಿವಾಜಿ ಮಹಾರಾಜರು ಅಫ್ಜಲ್ ಖಾನ್‌ನ್ನು ಕೊಂದಿದ್ದಾರೆ. ಆದರೆ ಹಿಂದೂ ಕ್ಯಾಲೆಂಡರ್ ಪ್ರಕಾರ ಈ ದಿನಾಂಕವನ್ನು ನಿರ್ಧರಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ .ವಾಘ್‌ನಖ್ ಉಕ್ಕಿನಿಂದ ರಚಿಸಲಾಗಿದೆ, ಮೊದಲ ಹಾಗೂ ನಾಲ್ಕನೇ ಬೆರಳಿಗೆ ಸಿಕ್ಕಿಸಿಕೊಳ್ಳಲು ಅನುವಾಗುವಂತೆ ಎರಡು ಉಂಗುರಗಳನ್ನು ಹೊಂದಿದೆ. ವಿಷಪೂರಿತ ವಾಘ್‌ನಕ್‌ನ್ನು ಮೊದಲು ರಜಪೂತ ಕುಲದವರು ಹತ್ಯೆಗೆ ಬಳಸುತ್ತಿದ್ದರು. ಆದರೆ ಆಯುಧದ ಅತ್ಯಂತ ಪ್ರಸಿದ್ಧ ಬಳಕೆಯ ಮೊದಲ ನಾಯಕ ಛತ್ರಪತಿ ಶಿವಾಜಿ ಆಗಿದ್ದಾರೆ.

ಚರಿತ್ರೆಯ ವಿವರ
ಶಿವಾಜಿ ಮಹಾರಾಜರನ್ನು ಸಂಧಾನದ ಸ್ನೇಹ ಮಾತುಕತೆಗೆ ಅಫ್ಜಲ ಖಾನ ಕರೆದಿದ್ದ. ಹೀಗೆ ಕರೆಸಿಕೊಂಡು ಶಿವಾಜಿಯನ್ನು ಕೊಲ್ಲುವ ಸಂಚು ಅವನದಾಗಿತ್ತು. ಈ ಬಗ್ಗೆ ಅಂದಾಜಿದ್ದ ಶಿವಾಜಿ ವ್ಯಾಘ್ರನಖ ಆಯುಧವನ್ನು ಬಚ್ಚಿಟ್ಟುಕೊಂಡು ಹೋಗಿದ್ದರು. ಆಜಾನುಬಾಹುವಾಗಿದ್ದ ಅಫ್ಜಲಖಾನನು ಸ್ನೇಹದ ಅಪ್ಪುಗೆ ನೆಪದಲ್ಲಿ ಶಿವಾಜಿ ಮಹಾರಾಜರನ್ನು ಬಿಗಿದಪ್ಪಿ ಬೆನ್ನಿಗೆ ಇರಿಯುವುದಕ್ಕೆ ಪ್ರಯತ್ನಿಸಿದ. ಅದಾಗಲೇ ಬೆನ್ನಿಗೆ ಕವಚ ಕಟ್ಟಿಕೊಂಡುಹೋಗಿದ್ದ ಶಿವಾಜಿ, ವ್ಯಾಘ್ರನಖವನ್ನು ಬಳಸಿ ಆತನ ಕರುಳು ಸೀಳಿ ಕೊಂದರು ಎನ್ನುತ್ತದೆ ಚರಿತ್ರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!