ಅಂಬೇಡ್ಕರ್ ಹೆಸರೇಳುವ ನೈತಿಕತೆ ಕಾಂಗ್ರೆಸಿಗರಿಗಿಲ್ಲ: ಸಂಸದ ಕಾರಜೋಳ

ಹೊಸದಿಗಂತ ವರದಿ,ಚಿತ್ರದುರ್ಗ:

ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ, ಅವರ ಮರಣದ ಸಂದರ್ಭದಲ್ಲಿ ಅಂತ್ಯಸಂಸ್ಕಾರಕ್ಕೂ ಜಾಗ ನೀಡದೆ ಅವಮಾನಿಸಿರುವ ಕಾಂಗ್ರೆಸ್ ಪಕ್ಷದವರಿಗೆ ಅಂಬೇಡ್ಕರ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಕಿಡಿಕಾರಿದ್ದಾರೆ.

ಮೊನ್ನೆ ರಾಜ್ಯಸಭೆಯಲ್ಲಿ ಗೃಹ ಸಚಿವರಾದ ಅಮಿತ್‌ ಶಾರವರು ಮಾತನಾಡುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದವರು ಕೇವಲ ಅಂಬೇಡ್ಕರ್‌ರವರ ಹೆಸರನ್ನು ಜಪ ಮಾಡುತ್ತಿದ್ದೀರಿಯೇ ವಿನಃ ಅವರನ್ನು ಗೌರವಿಸುವ ಕೆಲಸವನ್ನು ಮಾಡಲಿಲ್ಲ. ಅವರ ಜೀವಿತಾವಧಿಯಲ್ಲಿ ಅವರನ್ನು ಅವಮಾನಿಸಿ, ಈಗ ಅವರ ಹೆಸರನ್ನು ಜಪ ಮಾಡುತ್ತಿದ್ದೀರಿ ಎಂದು ಅಮಿತ್‌ ಶಾ ಕಾಂಗ್ರೆಸ್‌ನವರನ್ನು ದೂರಿದರು.

ಆದರೆ ಬಿ.ಜೆ.ಪಿ.ಯವರಾದ ನಾವು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ದೇವರಸ್ಥಾನದಲ್ಲಿ ನೋಡುತ್ತಿದ್ದೇವೆ ಎನ್ನುವ ಅರ್ಥದಲ್ಲಿ ಅಮಿತ್‌ ಶಾ ಆವರು ಮಾತನಾಡಿದ್ದರು. ಇದನ್ನು ಕಾಂಗ್ರೆಸಿಗರು ಅವರ ಹೇಳಿಕೆಯನ್ನು ತಿರುಚಿ ಮಾತನಾಡುವ ಮೂಲಕ ದೇಶದ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಇದು ಅತ್ಯಂತ ಖಂಡನೀಯ ಎಂದು ಸಂಸದ ಗೋವಿಂದ ಕಾರಜೋಳ ಅಸಮಾಧಾನ ಹೊರಹಾಕಿದ್ದಾರೆ.

ನೆಹರುರವರ ನೃತೃತ್ವದ ಕಾಂಗ್ರೆಸ್ ಡಾ. ಅಂಬೇಡ್ಕರ್ ಅವರನ್ನು ಯಾವ ರೀತಿ ನಡೆಸಿಕೊಂಡರು ಎನ್ನುವುದು ಇಡೀ ದೇಶಕ್ಕೆ ಅಲ್ಲ, ಇಡೀ ಜಗತ್ತಿಗೆ ಗೊತ್ತಿದೆ. ಅಂಬೇಡ್ಕರ್‌ರವರು ನಿಧನರಾದಾಗ ದೆಹಲಿಯಲ್ಲಿ ಅವರ ಅಂತ್ಯ ಸಂಸ್ಕಾರ ಮಾಡಲು ಆರಡಿ ಮೂರಡಿ ಜಾಗ ನೀಡದ ಕಾಂಗ್ರೆಸ್ ಪಕ್ಷಕ್ಕೆ ಅಂಬೇಡ್ಕರ್ ಹೆಸರು ಹೇಳುವ ಯೋಗ್ಯತೆ ಇಲ್ಲ. ಅವರು ಅರ್ಥಶಾಸ್ತ್ರಜ್ಞರಾಗಿದ್ದರೂ ಕೂಡ ಅವರಿಗೆ ಆರ್ಥಿಕ ಇಲಾಖೆಯನ್ನು ನೀಡದೇ ಕೇವಲ ಕಾನೂನು ಇಲಾಖೆಯನ್ನು ನೀಡಿ ಅವಮಾನ ಮಾಡಿದ್ದು ಕಾಂಗ್ರೆಸ್ ಪಕ್ಷ ಎಂದಿದ್ದಾರೆ.

ಅಂಬೇಡ್ಕರ್‌ರವರು ನೆಹರೂರವರ ಮಂತ್ರಿ ಮಂಡಲದಲ್ಲಿ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿ ಹೊರಗೆ ಬಂದ ನಂತರ ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಉದ್ದೇಶಪೂರ್ವಕವಾಗಿ ಸೋಲಿಸಿ ಅವಮಾನ ಮಾಡಿದ್ದು ಕಾಂಗ್ರೆಸ್ ಪಕ್ಷ. ಇಷ್ಟೇ ಅಲ್ಲ ಅಂಬೇಡ್ಕರ್ ಜೀವಿತಾವಧಿಯಲ್ಲಿ ಅವರಿಗೆ ’ಭಾರತ ರತ್ನ’ ನೀಡಿ ಪುರಸ್ಕರಿಸದೇ ಕೇವಲ ಗಾಂಧಿ ಕುಟುಂಬಕ್ಕೆ ಭಾರತ ರತ್ನ ಪ್ರಶಸ್ತಿ ಕೊಟ್ಟುಕೊಳ್ಳಲಾಯಿತು. ಇಷ್ಟಕ್ಕೂ ಅಂಬೇಡ್ಕರ್‌ರವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದು ಬಿ.ಜೆ.ಪಿ. ಬೆಂಬಲಿತ ವಿ.ಪಿ.ಸಿಂಗ್ ನೇತೃತ್ವದ ಸರ್ಕಾರವೇ ಹೊರತು ಕಾಂಗ್ರೆಸ್ ಅಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಇನ್ನೂ ಮುಂದುವರೆದು ಪ್ರಧಾನಿ ನರೇಂದ್ರ ಮೋದೀಜಿ ನೇತೃತ್ವದ ಎನ್.ಡಿ.ಎ. ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಅಂಬೇಡ್ಕರ್‌ರವರಿಗೆ ಸಂಬಂಧಿಸಿದ ಐದು ಸ್ಥಳಗಳನ್ನು ’ಪಂಚತೀರ್ಥ’ ಎಂದು ಘೋಷಿಸಿ ಸಮಗ್ರವಾಗಿ ಅಭಿವೃದ್ದಿಪಡಿಸುವ ಮೂಲಕ ಪ್ರವಾಸಿ ತಾಣಗಳನ್ನಾಗಿ ಮಾಡಲಾಗಿದೆ. ಅಂಬೇಡ್ಕರ್‌ರವರ ೧೨೫ನೇ ಜನ್ಮದಿನಾಚರಣೆಯ ಸ್ಮರಣೆಗಾಗಿ ಡಿಜಿಟಲ್ ಭೀಮ್ ಆಪ್ ನ್ನು ದೇಶಕ್ಕೆ ಸಮರ್ಪಿಸಲಾಗಿದೆ. ಇಂತಹ ಕಾರ್ಯಕ್ರಮಗಳನ್ನು ಜಾರಿ ಮಾಡುವ ಮೂಲಕ ಬಿಜೆಪಿ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಿದೆ. ಆದರೆ ಅಂಬೇಡ್ಕರ್ ಅವರನ್ನು ಅವಮಾನಿಸಿದ ಕಾಂಗ್ರೇಸ್ ಪಕ್ಷದವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅಂಬೇಡ್ಕರ್ ಹೆಸರು ಬಳಸಿಕೊಳ್ಳುತ್ತಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ ಕಿಡಿಕಾರಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!