ಹೊಸದಿಗಂತ ವರದಿ, ದಾವಣಗೆರೆ:
ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ ಸರಿಯಲ್ಲ. ಇಂತಹದ್ದು ನಡೆಯಬಾರದು. ಸಾಮಾಜಿಕ ಜಾಲತಾಣಗಳ ಮೂಲಕ ಎಲ್ಲರೂ ಒಂದೇ ಎನ್ನುವ ವಾತಾವರಣ ನಿರ್ಮಾಣವಾಗಬೇಕೆ ಹೊರತು ಸಮಾಜ, ದೇಶಕ್ಕೆ ಮಾರಕವಾಗುವಂತಹ ಕೆಲಸ ಆಗಬಾರದು ಎಂದು ವಿಧಾನಸಭೆ ಸಭಾಪತಿ ಯು.ಟಿ.ಖಾದರ್ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜಕ್ಕೆ ಮಾರಕವಾಗುವ, ಅವಿಶ್ವಾಸ ಹುಟ್ಟು ಹಾಕುವಂತಹ ಘಟನೆಗಳು ನಡೆಯಬಾರದು. ಯಾರೂ ಸಹ ಇಂತಹ ಕೆಲಸ ಮಾಡಬಾರದು. ಜನರು ಕೂಡ ಏನು ಮಾಡುತ್ತಿದ್ದೇವೆಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ತಮ್ಮ ತಪ್ಪುಗಳನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಸಮಾಜ, ದೇಶಕ್ಕೆ ಪೂರಕವಾಗುವ ಮಾತು, ಕೆಲಸ ಮಾಡಬೇಕು. ಮಾರಕವಾಗುವುದನ್ನು ಮಾಡಬಾರದು ಎಂದರು.
ವಿಧಾನಸಭೆ ಅಧಿವೇಶನ ಮಾರ್ಚ್ 3ರಿಂದ ಆರಂಭವಾಗಲಿದ್ದು, ಎರಡು ಹಂತದಲ್ಲಿ ಮಾ.21ರವರೆಗೆ ಅಧಿವೇಶನ ನಡೆಯಲಿದೆ. ರಾಜ್ಯಪಾಲರು ಜಂಟಿ ಸದನವನ್ನುದ್ದೇಶಿಸಿ ಮಾತನಾಡಲಿದ್ದಾರೆ. ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದಂತೆ ಮೂರು ದಿನ ಚರ್ಚೆಗೆ ಅವಕಾಶವಿದೆ. ಮಾ.೭ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. ಬಹುಶಃ 21ರವರೆಗೆ ಈಗ ನಿಗಧಿಪಡಿಸಿದಂತೆ ಅಧಿವೇಶನ ನಡೆಯಲಿದ್ದು, ಈ ಬಗ್ಗೆ ಅಂತಿಮ ರೂಪುರೇಷೆ ಸಿದ್ಧಪಡಿಸುತ್ತೇವೆ ಎಂದು ಅವರು ಹೇಳಿದರು.