ಹೊಸದಿಗಂತ ವರದಿ,ಮಡಿಕೇರಿ:
ಜುಲೈ ತಿಂಗಳ ಅಂತ್ಯದಲ್ಲಿ ಸೋಮವಾರಪೇಟೆಯಲ್ಲಿ ನಡೆದ ಉದ್ಯಮಿಯೊಬ್ಬರ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ವರ ಸಹಿತ ಏಳು ಮಂದಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ದಕ್ಷಿಣ ಕನ್ನಡ ಜಿಲ್ಲೆಯ ಕುದುಮಾರು ನಿವಾಸಿ ಕೆ.ರೋಷನ್ (32),ಕನ್ಯಾನದ ಸತೀಶ್ ರೈ(54), ವಿಟ್ಲ ಪಡೂರು ಗ್ರಾಮದ ಕೆ.ಗಣೇಶ್ (28), ವೀರಕಂಬದ ಕುಸುಮಾಕರ,(39) ವೀರಾಜಪೇಟೆ ಶಿವಕೇರಿಯ ಬಿ.ಎ.ಸೂರ್ಯಪ್ರಸಾದ್(43) ಸೋಮವಾರಪೇಟೆ ವೆಂಕಟೇಶ್ವರ ಬ್ಲಾಕ್’ನ ಹೆಚ್.ಪಿ. ವಿನೋದ್ ಕುಮಾರ್ (36) ಹಾಗೂ ಕುಶಾಲನಗರ ತಾಲೂಕಿನ ಹೆಬ್ಬಾಲೆಯ ಬಿ.ಮೋಹನ್ ಕುಮಾರ್ (45) ಎಂದು ಗುರುತಿಸಲಾಗಿದೆ.
ಆರೋಪಿಗಳು ಕೃತ್ಯಕ್ಕೆ ಬಳಸಿದ ಸ್ಯಾಂಟ್ರೋ ಹಾಗೂ ಮಾರುತಿ ಸ್ವಿಫ್ಟ್ ಕಾರು ಮತ್ತು 3.02 ಲಕ್ಷ ರೂ.ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ತಿಳಿಸಿದ್ದಾರೆ.
ಪ್ರಕರಣದ ಆರೋಪಿಗಳಾದ ರೋಷನ್, ಸತೀಶ್ ರೈ, ಗಣೇಶ ಹಾಗೂ ಕುಸುಮಾಕರ ಎಂಬವರು ಅಂತರ ಜಿಲ್ಲಾ ದರೋಡೆ ತಂಡದವರಾಗಿದ್ದು, ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಲೆ, ಕೊಲೆ ಪ್ರಯತ್ನ, ಕಿಡ್ನಾಪ್ ಮುಂತಾದ ಹಲವು ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗುವುದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ 2022ರಲ್ಲಿ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಕಂಡು ಬಂದಿದೆ ಎಂದು ರಾಮರಾಜನ್ ವಿವರಿಸಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಬಾಕಿ ಉಳಿದ ಆರೋಪಿಗಳಿಗಾಗಿ ವಿಶೇಷ ತನಿಖಾ ತಂಡದಿಂದ ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ಹೇಳಿದ್ದಾರೆ.
ಪ್ರಕರಣದ ವಿವರ: ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕಿಬ್ಬೆಟ್ಟ ಗ್ರಾಮದ ಕೆ.ಎಂ.ನೇಮಿರಾಜ್ ಎಂಬವರು ಸೋಮವಾರಪೇಟೆಯ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಅನುಷಾ ಮಾರ್ಕೆಟಿಂಗ್ ಏಜೆನ್ಸಿ ನಡೆಸುತ್ತಿದ್ದು, ಜು.29ರ ರಾತ್ರಿ 8.45 ಗಂಟೆಗೆ ತನ್ನ ಪತ್ನಿಯೊಂದಿಗೆ ಸ್ಕೂಟರ್‌ನಲ್ಲಿ ಮನೆಗೆ ಹೋಗುತ್ತಿದ್ದರು.
ಅಲ್ಲಿನ ಕಿಬ್ಬೆಟ್ಟ ರಸ್ತೆಯಲ್ಲಿರುವ ಸಾಕ್ಷಿ ಕನ್ವೆನ್ಸನ್ ಹಾಲ್ ಬಳಿಯ ತಿರುವಿನಲ್ಲಿ ಅಪರಿಚಿತ ವ್ಯಕ್ತಿಗಳು ಕಾರು ಮತ್ತು ಬೈಕಿನಲ್ಲಿ ಬಂದು ಅಡ್ಡಗಟ್ಟಿ ಮುಖಕ್ಕೆ ಖಾರದ ಪುಡಿ ಎರಚಿ ಸ್ಕೂಟರ್‌ನಿಂದ ತಳ್ಳಿ ಬೀಳಿಸಿ ನೇಮಿರಾಜ್ ಅವರ ಪತ್ನಿಗೆ ಹಲ್ಲೆ ಮಾಡಿ 6.18 ಲಕ್ಷ ರೂ.ನಗದು ಹಾಗೂ 3 ಮೊಬೈಲ್ ಪೋನ್‌ಗಳಿದ್ದ ಬ್ಯಾಗನ್ನು ಕಿತ್ತುಕೊಂಡು ಪರಾರಿಯಾಗಿದ್ದರು.
ಈ ಕುರಿತು ಸೋಮವಾರಪೇಟೆ ಠಾಣೆಯಲ್ಲಿ ದೂರು ದಾಖಲಾಗಿತ್ತಲ್ಲದೆ, ಅದೇ ದಿನ ರಾತ್ರಿ 11ಗಂಟೆಗೆ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಂದರ್ ರಾಜ್, ಸೋಮವಾರಪೇಟೆ ಡಿವೈಎಸ್ಪಿ ಆರ್.ವಿ. ಗಂಗಾಧರಪ್ಪ, ಇನ್ಸ್‌ಪೆಕ್ಟರ್ ಮುದ್ದು ಮಾದೇವ ಪಿಎಸ್ಐ ಗೋಪಾಲ, ಅಪರಾಧ ಪತ್ತೆ ತಜ್ಞರ ತಂಡ ಹಾಗೂ ಸಿಬ್ಬಂದಿಗಳಿ ಭೇಟಿ ನೀಡಿ ಅಪರಾಧ ಕೃತ್ಯದ ಕುರಿತು ಮಾಹಿತಿ ಹಾಗೂ ಸಾಕ್ಷಾಧಾರಗಳನ್ನು ಕಲೆ ಹಾಕಿದ್ದರು.
ಡಿವೈಎಸ್ಪಿ ಆರ್.ವಿ. ಗಂಗಾಧರಪ್ಪ ಅವರ ನೇತೃತ್ವದಲ್ಲಿ ಮುದ್ದು ಮಾದೇವ, ಗೋಪಾಲ, ಸೋಮವಾರಪೇಟೆ ಉಪವಿಭಾಗದ ಅಪರಾಧ ತನಿಖೆ/ಪತ್ತೆ ಸಿಬ್ಬಂದಿಗಳು ಹಾಗೂ ಡಿಸಿಆರ್‌ಬಿ ಮತ್ತು ತಾಂತ್ರಿಕ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತನಿಖಾ ತಂಡ ನಡೆಸಿದ ತನಿಖೆಯಲ್ಲಿ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಆರೋಪಿಗಳ ಪೈಕಿ ರೋಷನ್ ಚಾಲಕ ವೃತ್ತಿ ಮಾಡುತ್ತಿದ್ದು, ಸತೀಶ್ ರೈ ವ್ಯವಸಾಯ, ಗಣೇಶ್ ಪೈಂಟರ್, ಕುಸುಮಾಕರ ಹಾಗೂ ಮೋಹನ್ ಕುಮಾರ್ ಕೂಲಿ ಕಾರ್ಮಿಕರಾಗಿದ್ದಾರೆ. ಸೂರ್ಯಪ್ರಸಾದ್ ಅರ್ಚಕ ವೃತ್ತಿಯಲ್ಲಿದ್ದರೆ, ವಿನೋದ್ ಕುಮಾರ್ ಸಿಲ್ವರ್ ಮರ ವ್ಯಾಪಾರಿ ಹಾಗೂ ಬಳಸಿದ ವಾಹನಗಳ ಡೀಲರ್ ಎಂದು ತಿಳಿದು ಬಂದಿದೆ.