October 19, 2026
Monday, October 19, 2026
spot_img

ಆಟವಾಡುತ್ತಾ ಕೆರೆಗೆ ಬಿದ್ದ ಮಗ, ರಕ್ಷಿಸಲು ಧುಮುಕಿದ ತಂದೆ ಇಬ್ಬರೂ ದಾರುಣ ಸಾ*ವು

ಹೊಸದಿಗಂತ ವರದಿ ಮಡಿಕೇರಿ:

ಆಕಸ್ಮಿಕವಾಗಿ ಕೆರೆಗೆ ಬಿದ್ದ ಮಗ ಹಾಗೂ ಆತನನ್ನು ರಕ್ಷಿಸಲು ಕೆರೆಗೆ ಇಳಿದ ತಂದೆ ಇಬ್ಬರೂ ನೀರಿನಲ್ಲಿ ಮುಳುಗಿ ಸಾವಿಗೀಡಾದ ಹೃದಯ ವಿದ್ರಾವಕ ಘಟನೆ ಪೊನ್ನಂಪೇಟೆ ತಾಲೂಕಿನ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ.

ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎರಡನೇ ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಜೆ. ಕೆ. ಕೆಂಚ (8) ಹಾಗೂ ಆತನ ತಂದೆ ಜೇನುಕುರುಬರ ಶಿವಣ್ಣ(40) ಮೃತಪಟ್ಟವರು. ಚಿಕ್ಕಮುಂಡೂರು ಗ್ರಾಮದ ಜಾಲಿ ಪೂವಯ್ಯ ಎಂಬವರ ಲೈನ್ ಮನೆಯಲ್ಲಿ ಜೆ.ಕೆ.ಶಿವಣ್ಣ ತನ್ನ ಕುಟುಂಬದೊಂದಿಗೆ ನೆಲೆಸಿದ್ದು, ಭಾನುವಾರ ಶಾಲೆಗೆ ರಜೆ ಇದ್ದ ಹಿನ್ನಲೆಯಲ್ಲಿ ತನ್ನ ಕುಟುಂಬದವರೊಂದಿಗೆ ಕೆರೆಗೆ ತೆರಳಿದ್ದರು. ಕೆರೆಯ ಬಳಿ ಸ್ನಾನ ಮಾಡಿಕೊಂಡು ಆಟವಾಡಿಕೊಂಡಿದ್ದ, ಬಾಲಕ ಕೆಂಚ ಆಕಸ್ಮಿಕವಾಗಿ ಕೆರೆಗೆ ಬಿದ್ದಿದ್ದು, ಇದನ್ನು ಗಮನಿಸಿದ ತಂದೆ ಶಿವಣ್ಣ ಮಗನನ್ನು ರಕ್ಷಿಸುವ ಸಲುವಾಗಿ ನೀರಿಗೆ ಇಳಿದಿದ್ದಾರೆ.

ಆದರೆ ಕೆರೆಯಲ್ಲಿ ಹೂಳು ಇದ್ದ ಕಾರಣ ದುರದೃಷ್ಟವಶಾತ್ ನೀರಿನಿಂದ ಹೊರಬರಲಾಗದೆ, ತಂದೆ ಮಗ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿ ಹೇಳಲಾಗಿದೆ. ಭಾನುವಾರ ಸಂಜೆ ಶಿವಣ್ಣನ ಶವವನ್ನು ಕೆರೆಯಿಂದ ಹೊರಗೆ ತೆಗೆಯಲಾಗಿದ್ದು, ಸೋಮವಾರ ಬಾಲಕನ ಮೃತದೇಹವನ್ನು ಹೊರತೆಗೆಯಲಾಗಿದೆ.

ಕಣ್ಣೆದುರೇ ಗಂಡ ಹಾಗೂ ಮಗನನ್ನು ಕಳೆದುಕೊಂಡ ಶಿವಣ್ಣ ಅವರ ಪತ್ನಿ ಸುಮತಿ ತನ್ನ ಇನ್ನಿಬ್ಬರು ಪುಟ್ಟ ಮಕ್ಕಳೊಂದಿಗೆ ರೋಧಿಸುತಿದ್ದ ದೃಶ್ಯ, ಹಾಗೂ ಮಗ ಮೊಮ್ಮಗನನ್ನು ಕಳೆದುಕೊಂಡ ಶಿವಣ್ಣ ಅವರ ತಾಯಿಯ ಆಕ್ರಂದನ ಮುಗಿಲುಮುಟ್ಟಿತ್ತು.

ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಕುಟ್ಟ ವೃತ್ತ ನಿರೀಕ್ಷಕ ಶಿವರುದ್ರಪ್ಪ ಹಾಗೂ ಶ್ರೀಮಂಗಲ ಠಾಣಾಧಿಕಾರಿ ರವೀಂದ್ರ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತ ದೇಹಗಳನ್ನು ಕುಟುಂಬದವರಿಗೆ ಒಪ್ಪಿಸಲಾಗಿದೆ.

Must Read