ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ನಿರಾಹಾರ ಸತ್ಯಾಗ್ರಹವನ್ನು ಮುಕ್ತಾಯಗೊಳಿಸಿದ್ದ ಖ್ಯಾತ ಪರಿಸರ ತಜ್ಞ ಸೋನಂ ವಾಂಗ್ಚುಕ್ ಅವರು ಗುರುಗ್ರಾಮದ ಮೆದಾಂತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಆ ಬಳಿಕ ಅವರು ದೇಶದ ರಾಜಧಾನಿ ದೆಹಲಿಯಿಂದ ಜಮ್ಮು-ಕಾಶ್ಮೀರದತ್ತ ಪ್ರಯಾಣ ಬೆಳೆಸಿದರು. ಕಾಶ್ಮೀರದಲ್ಲಿ ಒಂದು ದಿನ ತಂಗಿದ್ದ ಅವರು, ನಂತರ ತಮ್ಮ ತಾಯ್ನಾಡಾದ ಲಡಾಖ್‌ಗೆ ತಲುಪಿದರು.
ವಂದೇ ಭಾರತ್ ರೈಲು ಸೇವೆಗೆ ಜೈಹೋ:
ಈ ಪಯಣಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಆಯ್ಕೆ ಮಾಡಿಕೊಂಡಿದ್ದ ವಾಂಗ್ಚುಕ್, ಭಾರತೀಯ ರೈಲ್ವೆಯ ಆಧುನಿಕ ಮೂಲಸೌಕರ್ಯ ಮತ್ತು ಸೇವಾ ವೇಗವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ವೀಡಿಯೋ ಹಂಚಿಕೊಂಡಿರುವ ಅವರು, ರೈಲು ಪ್ರಯಾಣ ಎಂದರೆ ತಮಗೆ ಅತ್ಯಂತ ಪ್ರಿಯ ಎಂದು ತಿಳಿಸಿದ್ದಾರೆ.
ವಿಶ್ವದ ಅತಿ ಎತ್ತರದ ಚೆನಾಬ್ ಸೇತುವೆ ವೀಕ್ಷಣೆ:
ಪ್ರಯಾಣದ ಮಾರ್ಗಮಧ್ಯೆ ಕಟ್ರಾ-ಬನಿಹಾಲ್ ಭಾಗದಲ್ಲಿರುವ ಜಗತ್ತಿನ ಅತ್ಯಂತ ಎತ್ತರದ ಚೆನಾಬ್ ರೈಲ್ವೆ ಸೇತುವೆಯನ್ನು ಕಣ್ಣುಂಬಿಕೊಂಡ ಅವರು, ಈ ಎಂಜಿನಿಯರಿಂಗ್ ವಿಸ್ಮಯವನ್ನು ಕಂಡು ರೋಮಾಂಚನಗೊಂಡಿದ್ದಾರೆ. ನವ ಭಾರತದ ಮೂಲಸೌಕರ್ಯ ಪ್ರಗತಿಗೆ ಈ ಹೈ-ಸ್ಪೀಡ್ ರೈಲು ಮತ್ತು ಬೃಹತ್ ಸೇತುವೆಗಳು ಅತ್ಯುತ್ತಮ ನಿದರ್ಶನವಾಗಿದ್ದು, ರೈಲ್ವೇಯ ಈ ಸಾಧನೆ ಪ್ರತಿಯೊಬ್ಬ ಭಾರತೀಯನಲ್ಲೂ ಹೆಮ್ಮೆ ಮೂಡಿಸುವಂತಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.



