ವಾಮಾಚಾರ ನಡೆಸಿ ನಿಧಿಗಾಗಿ ಶೋಧ: ಇಬ್ಬರ ಬಂಧನ

ಹೊಸದಿಗಂತ ವರದಿ, ಕೊಡಗು:

ವಾಮಾಚಾರ ನಡೆಸಿ ನಿಧಿ ಶೋಧನೆ ನಡೆಸುತ್ತಿದ್ದ ಇಬ್ಬರನ್ನು ಕೊಡಗು ಜಿಲ್ಲಾ ಅಪರಾಧ ಪತ್ತೆದಳ ಹಾಗೂ ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.
ವೀರಾಜಪೇಟೆ ತಾಲೂಕಿನ ಚೆನ್ನಯ್ಯನಕೋಟೆ ಹೊಲಮಾಳ ನಿವಾಸಿ ಎಂ.ಆರ್.ಗಣೇಶ್ (23) ಹಾಗೂ ಉಡುಪಿ ಜಿಲ್ಲೆಯ ಪಡುಬಿದ್ರಿ ಹಂಚಿನಡ್ಕ ನಿವಾಸಿ ಸಾದಿಕ್(42) ಬಂಧಿತ‌ ಆರೋಪಿಗಳಾಗಿದ್ದು, ಆರೋಪಿಗಳ ವಿರುದ್ದ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ವಾಮಾಚಾರಕ್ಕೆ ಬಳಸಿದ ಕೆಲವು ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ವೀರಾಜಪೇಟೆ ತಾಲೂಕಿನ ಸಿದ್ದಾಪುರ ಚೆನ್ನಯ್ಯನಕೋಟೆ ಹೊಲಮಾಳ ಗ್ರಾಮದಲ್ಲಿ ವಾಮಾಚಾರ ನಡೆಸಿ ನಿಧಿ ಶೋಧನೆ ನಡೆಸುತ್ತಿರುವುದಾಗಿ ದೊರೆತ ಸುಳಿವಿನ ಮೇರೆಗೆ ಶನಿವಾರ ಅಲ್ಲಿನ ಕೋಟೆ ಪೈಸಾರಿಯ ಎಂ.ಆರ್ ಗಣೇಶ್ ಎಂಬವರ ಮನೆಗೆ ದಾಳಿ ನಡೆಸಿದ ಡಿಸಿಐಬಿ ಹಾಗೂ ಸಿದ್ದಾಪುರ ಪೊಲೀಸರು ವಾಮಾಚಾರ ನಡೆಸಿ ನಿಧಿ ಶೋಧನೆಯಲ್ಲಿ ತೊಡಗಿದ್ದ ಎಂ.ಆರ್ ಗಣೇಶ್ ಹಾಗೂ ಉಡುಪಿ ಮೂಲದ ಸಾಧಿಕ್ ಎಂಬವರನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳಿಬ್ಬರು ಮಂಗಳೂರು ಹಾಗೂ ಕೇರಳ ಮೂಲದ ವಾಮಾಚಾರಿಗಳ ಬಲೆಗೆ ಬಿದ್ದು ಮೌಢ್ಯತೆಯಿಂದ ಮನೆಯ ಬೆಡ್ ರೂಂನ ಮಣ್ಣಿನಡಿಯಲ್ಲಿ ನಿಧಿ ಇದೆಯೆಂದು ಸುಮಾರು 15 ಅಡಿಗಳಷ್ಟು ಮಣ್ಣು ತೆಗೆದು ಗುಂಡಿ ತೋಡಿದ್ದರು. ನಿಧಿ ಶೋಧನೆಯ ಸಂಬಂಧ ಕೋಳಿ ಬಲಿ ಪೂಜೆ ನಡೆಸಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಬಲಿ ಪೂಜೆ ನಡೆಸಲು ನಿರ್ಧರಿಸಲಾಗಿತ್ತೆಂದು ಆರೋಪಿಗಳು ಬಾಯಿಬಿಟ್ಟಿದ್ದಾರೆ.
ಮೌಢ್ಯತೆಯಿಂದ ಇನ್ನೂ ಕೆಲವು ಅಡಿಗಳಷ್ಟು ಮಣ್ಣು ತೆಗೆದಿದಲ್ಲಿ ಮನೆ ಕುಸಿದು ಮನೆಯಲ್ಲಿದ್ದವರೆಲ್ಲ ಸಾವನ್ನಪ್ಪುವ ಸಾಧ್ಯತೆಯಿತ್ತು. ಆದರೆ ಪೊಲೀಸರ ಸಕಾಲಿಕ ಕಾರ್ಯಾಚರಣೆಯಿಂದ ಮುಂದೆ ನಡೆಯಬಹುದಾಗಿದ್ದ ಭಾರಿ ಅನಾಹುತ ತಪ್ಪಿದಂತಾಗಿದೆ.
ತಲೆಮರೆಸಿಕೊಂಡ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.
ಮಡಿಕೇರಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಗಜೇಂದ್ರ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಅಪರಾಧ ಗುಪ್ತದಳ ಇನ್ಸ್ಪೆಕ್ಟರ್ ಐ.ಪಿ ಮೇದಪ್ಪ, ಮಡಿಕೇರಿ ನಗರ ವೃತ್ತ ನಿರೀಕ್ಷಕ ಪಿ.ವಿ ವೆಂಕಟೇಶ್ ಹಾಗೂ ಡಿಸಿಐಬಿ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!