ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕೊರಿಯಾದ ಮುವಾನ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಸಂಭವಿಸಿದ ದುರಂತದಲ್ಲಿ 179 ಮಂದಿ ಸಾವಿಗೀಡಾದ ಬೆನ್ನಲ್ಲೇ ದೇಶದ ವಿಮಾನಯಾನ ಸಂಸ್ಥೆಗಳು ಎಲ್ಲಾ ಬೋಯಿಂಗ್ 737-800 ವಿಮಾನಗಳ ಸುರಕ್ಷತಾ ತಪಾಸಣೆ ನಡೆಸುವುದಾಗಿ ಸೋಮವಾರ ತಿಳಿಸಿದೆ .
ಅಪಘಾತಕ್ಕೆ ನಿಖರ ಕಾರಣ ಏನೆಂಬುದನ್ನು ಪತ್ತೆಹಚ್ಚುವ ತನಿಖೆಯ ಭಾಗವಾಗಿ ತಪಾಸಣೆಗೆ ಮುಂದಾಗಿದೆ ಎಂದು ವರದಿಯಾಗಿದೆ.
ದಕ್ಷಿಣ ಕೊರಿಯಾದ ಹಂಗಾಮಿ ಅಧ್ಯಕ್ಷ ಚೋಯ್ ಸಾಂಗ್-ಮೊಕ್ ಅವರಿಂದು ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ದೇಶದ ವಿಮಾನ ಕಾರ್ಯಾಚರಣೆ ವ್ಯವಸ್ಥೆಗಳ ತುರ್ತು ಪರಿಶೀಲನೆ ನಡೆಸಿದರು. ಅಲ್ಲದೇ ಇಂತಹ ಘಟನೆಗಳು ಪುನರಾವರ್ತನೆ ಆಗಬಾರದು. ಅದಕ್ಕಾಗಿ ಬೋಯಿಂಗ್ 737-800 ವಿಮಾನಗಳ ಸುರಕ್ಷತಾ ತಪಾಸಣೆ ನಡೆಸಿ, ದೇಶದ ಒಟ್ಟಾರೆ ವಾಯುಯಾನ ಸುರಕ್ಷತಾ ವ್ಯವಸ್ಥೆಯನ್ನ ನವೀಕರಿಸಲು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಬೋಯಿಂಗ್ 737-800 ವಿಮಾನವು ಬೋಯಿಂಗ್-737 ಮ್ಯಾಕ್ಸ್ ಸರಣಿಗಿಂತಲೂ ವಿಭಿನ್ನವಾಗಿದೆ. ಆದ್ದರಿಂದ ಜೆಟ್ ಏರ್‌ಲೈನ್‌ಗಳ ಲೆಕ್ಕಪರಿಶೋಧನೆ ಮತ್ತು ಸುರಕ್ಷತಾ ಮಾನದಂಡಗಳ ಕುರಿತು ವಿಮರ್ಷೆ ನಡೆಸುವುದಾಗಿ ಡೆಲ್ಟಾ ಏರ್ ಲೈನ್ಸ್‌ನ ಮಾಜಿ ಮುಖ್ಯ ಪೈಲಟ್ ಮತ್ತು ಈಗ ಸಲಹೆಗಾರರಾಗಿರುವ ಅಲನ್ ಪ್ರೈಸ್ ಹೇಳಿದ್ದಾರೆ.
ಒಂದು ದಿನದ ಹಿಂದೆಯಷ್ಟೇ ದಕ್ಷಿಣ ಕೊರಿಯಾದ ಮುವಾನ್ ವಿಮಾನ ನಿಲ್ದಾಣದಲ್ಲಿ ಪತನಗೊಂಡ ವಿಮಾನ ಕಂಪನಿಯು 39 ಬೋಯಿಂಗ್ 737-800 ಸರಣಿಯ ವಿಮಾನಗಳನ್ನು ನಿರ್ವಹಿಸುತ್ತದೆ. ಒಟ್ಟು 181 ಮಂದಿ ಪ್ರಯಾಣಿಕ ಪೈಕಿ ಇಬ್ಬರು ಮಾತ್ರ ಬದುಕುಳಿದು ಪವಾಡ ಸೃಷ್ಟಿಸಿದ್ದಾರೆ, ಆದ್ರೆ ಅವರ ಆರೋಗ್ಯ ಸ್ಥಿತಿಯೂ ಗಂಭೀರವಾಗಿದೆ ಏನ್ನಲಾಗಿದೆ.