ಸೈಬರ್ ಅಪರಾಧ ತಡೆಗೆ ಪೊಲೀಸರಿಂದ ವಿಶೇಷ ಜಾಗೃತಿ ಅಭಿಯಾನ

– ವಿಜಯಕುಮಾರ ಬೆಳ್ಳೇರಿಮಠ

ಹುಬ್ಬಳ್ಳಿ:

ವಿದೇಶದಲ್ಲಿ ಉದ್ಯೋಗ ಕೊಡಿಸಲಾಗುವುದು, ಪಾರ್ಟ್ಟೈಮ್ ಕೆಲಸ ಮಾಡಿ ಹೆಚ್ಚು ಹಣ ಗಳಿಸಬಹುದು ಎಂದು ಹಲವಾರು ಆಸೆ, ಆಮಿಷವೊಡ್ಡಿ ಆನ್ಲೈನ್ ಮೂಲಕ ವಂಚಿಸುತ್ತಿರುವ ಪ್ರಕರಣಗಳು ಅವಳಿನಗರದಲ್ಲಿ ಹೆಚ್ಚುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಸೈಬರ್ ಅಪರಾಧ ಪೊಲೀಸ್ ಠಾಣಾ ಸಿಬ್ಬಂದಿ ಶಿಕ್ಷಣ ಸಂಸ್ಥೆಗಳಲ್ಲಿ ಜಾಗೃತಿ ಅಭಿಯಾನ ಆರಂಭಿಸಿದೆ.

ಐದು ವರ್ಷಗಳಲ್ಲಿ 768 ಸೈಬರ್ ಕ್ರೈಂ ಪ್ರಕರಣಗಳು ದಾಖಲಾಗಿವೆ. ಹಿಂದೆ ಸಾರ್ವಜನಿಕ ಸ್ಥಳಗಳಲ್ಲಿ ಬಿತ್ತಿ ಪತ್ರಗಳ ನೀಡುವ ಮೂಲಕ ಜಾಗೃತಿ ಕಾರ್ಯ ಹಮ್ಮಿಕೊಂಡಿದ್ದರು. ಇದು ಅಷ್ಟೊಂದು ಪರಿಣಾಮ ಬೀರಲಿಲ್ಲ. ವಿದ್ಯಾವಂತರು ಹಾಗೂ ವಿದ್ಯಾರ್ಥಿಗಳು ಹೆಚ್ಚು ಸೈಬರ್ ವಂಚನೆಗೊಳಗಾಗುತ್ತಿರುವುದರಿಂದ ಶಿಕ್ಷಣ ಸಂಸ್ಥೆ ಗುರಿಯಾಗಿಸಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ.

ತಂಡಗಳ ರಚನೆ: ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಲು ಮೂರು ತಂಡಗಳ ರಚನೆ ಮಾಡಲಾಗಿದೆ. ಇಲ್ಲಿಯವರೆಗೆ 20ಕ್ಕೂ ಹೆಚ್ಚು ಶಾಲಾ, ಕಾಲೇಜುಗಳಿಗೆ ಭೇಟಿ ನೀಡಿದ ತಂಡಗಳು ಪಿಪಿಟಿ ಮೂಲಕ ಕಾರ್ಯಾಗಾರ ನಡೆಸಿ ಜಾಗೃತಿ ಮೂಡಿಸುತ್ತಿದೆ. ಅಷ್ಟೇ ಅಲ್ಲದೆ ಸೈಬರ್ ವಂಚನೆಗಳಿಗೆ ಸಾಮಾನ್ಯ ಜನರು ಯಾವ ರೀತಿ ಒಳಗಾಗುತ್ತಿದ್ದಾರೆ ಎಂಬ ಹತ್ತು ಹಲವಾರು ವರದಿಯ ಅಂಶಗಳ ಪಟ್ಟಿ ಸಿದ್ಧ ಪಡಿಸಿ ವಿದ್ಯಾರ್ಥಿಗಳಿಗೆ ನೀಡಿ ಅದರ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.

ಶಿಕ್ಷಣ ಸಂಸ್ಥೆಗಳ ಸಹಕಾರ: ಈಗಾಗಲೇ ಹು-ಧಾ ಅವಳಿನಗರಲ್ಲಿ ಎಸ್ಡಿಎಂ ಕಾಲೇಜು, ವಿದ್ಯಾನಿಕೇತನ ಶಾಲೆ, ಜೆ.ಕೆ.ಶಿಕ್ಷಣ ಸಂಸ್ಥೆ ಹಾಗೂ ಧಾರವಾಡ ಮಹಿಳಾ ಕಾಲೇಜು ಸೇರಿದಂತೆ ಹಲವಾರು ಕಾಲೇಜಿನಲ್ಲಿ ಜಾಗೃತಿ ಅಭಿಯಾನ ಮಾಡಲಾಗಿದೆ. ಆ ಶಿಕ್ಷಣ ಸಂಸ್ಥೆಯವರು ಸಹ ಸಂಪೂರ್ಣವಾಗಿ ಸಹಕರಿಸಿದ್ದಾರೆ ಎಂದು ಸೈಬರ್ ಅಪರಾಧ ಪೊಲೀಸ್ ಠಾಣಾಕಾರಿ ಎಂ.ಎಸ್.ಹೂಗಾರ ತಿಳಿಸಿದರು. ಸಾರ್ವಜನಿಕ ಸ್ಥಳಗಳಾದ ದುರ್ಗದಬೈಲ್, ಸಿಬಿಟಿ, ಹಳೇ ಹುಬ್ಬಳ್ಳಿ, ನವನಗರ, ಧಾರವಾಡ ಜುಬ್ಲಿ ವೃತ್ತ, ಹಳೇ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಬಿಆರ್ಟಿಎಸ್ ಬಸ್ ನಿಲ್ದಾಣಗಳಲ್ಲಿ ಬಿತ್ತಿ ಪತ್ರ ಗೋಡೆಗಳಿಗೆ ಅಂಟಿಸಿ ಹಾಗೂ ಜನಸಾಮಾನ್ಯರಿಗೆ ನೀಡಿಯೂ ಸಹ ಜಾಗೃತಿ ಮೂಡಿಸಲಾಗುತ್ತಿದೆ.

ತಿಳಿವಳಿಕೆ ಸಂದೇಶ ಪಟ್ಟಿ : ಎಟಿಎಂ ಕಾರ್ಡ್ ವಂಚನೆ, ಓಎಲ್ಎಕ್ಸ್, ಕ್ವಿಕರ್ ಮೂಲಕ ವಂಚನೆ, ಸಾಲ ಕೊಡುವ ನೆಪದಲ್ಲಿ ವಂಚನೆ, ವಿವಾಹದ ಹಲವಾರು ವೆಬ್ಸೈಟ್ಗಳಿಂದ ವಂಚನೆ, ಸಾಮಾಜಿಕ ಜಾಲತಾಣದಿಂದ, ಅಪರಿಚಿತ ವ್ಯಕ್ತಿ ವಾಟ್ಸ್ಆಪ್ ವಿಡಿಯೋ ಕಾಲ ಮಾಡಿ ಬೆದರಿಕೆ ಹಾಕುವುದು, ಕಸ್ಟಮರ್ ಕೇರ್ ಸೋಗಿನಲ್ಲಿ ಮಾತನಾಡಿ, ಕ್ಯೂಆರ್ ಕೋಡ್ ಮೂಲಕ ಹಣ ವಂಚಿಸುತ್ತಿದ್ದಾರೆ ಎಂದು ವಿವರವಾಗಿ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!