ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿರಿಯ ಪತ್ರಕರ್ತ, ಹೊಸ ದಿಗಂತ ಪತ್ರಿಕೆಯ ವಿಶೇಷ ವರದಿಗಾರ ಗುರುವಪ್ಪ ಎನ್.ಟಿ. ಬಾಳೇಪುಣಿ ಅವರು ಪತ್ರಿಕೋದ್ಯಮ, ಪತ್ರಕರ್ತ, ಬಾಳೇಪುಣಿ ಬೇರೆಯಲ್ಲ ಎಂಬಂತೆ ಬಾಳಿ ಬದುಕಿದವರು. ಅನಿಸಿದ್ದನ್ನು ನೇರವಾಗಿ ಹೇಳುವ ವ್ಯಕ್ತಿತ್ವ ಅವರದ್ದು. ಯುವ ಪತ್ರಕರ್ತರಿಗೆ ಬಾಳೇಪುಣಿ ಅವರು ಪ್ರೇರಣೆ ಎಂದು ಹೊಸ ದಿಗಂತ ಪತ್ರಿಕೆ ಸಿಇಒ ಪಿ.ಎಸ್. ಪ್ರಕಾಶ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್‌ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಹೊಸ ದಿಗಂತ ವಿಶೇಷ ವರದಿಗಾರ ಗುರುವಪ್ಪ ಎನ್.ಟಿ. ಬಾಳೇಪುಣಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ನುಡಿನಮನ ಸಲ್ಲಿಸಿದರು.
ತಾನು ಮಾಡುವ ಕೆಲಸ ಹಾಗೂ ಸಂಸ್ಥೆಯನ್ನು ಬಾಳೇಪುಣಿ ಪ್ರೀತಿಸುತ್ತಿದ್ದರು. ಹೊಸ ದಿಗಂತವನ್ನು ಅವರು ಮನೆಯಂತೆ ಸ್ವೀಕಾರ ಮಾಡಿದ್ದರು. ಎಲ್ಲರ ಜತೆ ಗೌರವಯುತವಾಗಿ ಬದುಕಿದವರು. ಸದಾ ಹೊಸತನ್ನು ಹುಡುಕುತ್ತಿದ್ದ ಬಾಳೇಪುಣಿ ಅವರು ದುಶ್ಚಟ ಮುಕ್ತರು, ಕೃಷಿಕರು ಸೇರಿದಂತೆ ಸಮಾಜದ ವಿವಿಧ ಸ್ತರದ ಸಾಧಕರ ಪರಿಚಯ ಮಾಡುವ ಮೂಲಕ ಸಮಾಜದಲ್ಲಿ ಇರುವ ಸುದ್ದಿಯನ್ನು ಹುಡುಕುವ ಕಣ್ಣು ಬೇಕು ಎಂದು ತೋರಿಸಿಕೊಟ್ಟವರು. ಗ್ರಾಮೀಣ ಬದುಕನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಅಗಲುವಿಕೆ ಮೂಲಕ ಒಳ್ಳೆಯ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ ಎಂದರು.
ಬಾಳೆಪುಣಿ ಬೆನ್ನೆಲುಬಾಗಿದ್ದರು
ಅಕ್ಷರ ಸಂತ ಹರೇಕಳ ಹಾಜಬ್ಬ ಮಾತನಾಡಿ, 2004 ಸೆ.16ರಂದು ಹೊಸ ದಿಗಂತ ಪತ್ರಿಕೆಯಲ್ಲಿ ‘ಕಿತ್ತಳೆ ಬುಟ್ಟಿಯಲ್ಲಿ ಅರಳಿದ ಅಕ್ಷರ ಕನಸು’ ಶೀರ್ಷಿಕೆಯ ವರದಿಯಲ್ಲಿ ನನ್ನ ಬಗ್ಗೆ ಮೊದಲ ಬಾರಿಗೆ ಬಾಳೇಪುಣಿ ಅವರು ಪರಿಚಯಿಸಿದ್ದಾರೆ. ಆ ಮೂಲಕ ಸಾಮಾನ್ಯ ಮನುಷ್ಯನೊಬ್ಬನನ್ನು ಜಗತ್ತು ಗುರುತಿಸುವಂತೆ ಮಾಡಿ, ರಾಷ್ಟ್ರಪತಿ, ಪ್ರಧಾನಮಂತ್ರಿ ಅವರನ್ನು ಭೇಟಿಯಾಗವಂತೆ ಮಾಡಿದವರು ಬಾಳೇಪುಣಿ. ಇಲ್ಲಿವರೆಗೆ ನನ್ನ ಎಲ್ಲ ಕಷ್ಟ ಸುಖಗಳಿಗೆ ಬಾಳೇಪುಣಿ ಬೆನ್ನೆಲುಬಾಗಿದ್ದರು. ನನ್ನ ಈಗಿನ ಎಲ್ಲ ಏಳ್ಗೆಗೆ ಮೂಲ ಕಾರಣ ಬಾಳೇಪುಣಿಯವರು ಎಂದರು.
ದಕ್ಷಿಣ ಕನ್ನಡ ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ , ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ , ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ,ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಪತ್ರಿಕಾ ಛಾಯಾಗ್ರಾಹಕ ರವಿ ಪೊಸವಣಿಕೆ,ಹಿರಿಯ ಪತ್ರಕರ್ತ, ಹೊಸ ದಿಗಂತ ನಿವೃತ್ತ ಮುಖ್ಯ ವರದಿಗಾರ ಕೆ. ಆನಂದ ಶೆಟ್ಟಿ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಪತ್ರಕರ್ತ ಭಾಸ್ಕರ ರೈ ಕಟ್ಟ, ಬಾಳೇಪುಣಿ ಅವರ ಅಣ್ಣನ ಮಗ ಸುಧೀರ್ ನುಡಿ ನಮನ ಸಲ್ಲಿಸಿದರು.
ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್., ಬಾಳೇಪುಣಿ ಅವರ ಪುತ್ರ ಮನೇಶ ಬಾಳೇಪುಣಿ ಉಪಸ್ಥಿತರಿದ್ದರು. ಈ ವೇಳೆ ಬಾಳೇಪುಣಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.