ಹೊಸದಿಗಂತ ವರದಿ ಕಾರವಾರ:
ದೇಶ ಮೊದಲು ಎನ್ನುವ ಮನೋಭಾವ ಪ್ರತಿಯೊಬ್ಬ ದೇಶವಾಸಿಗಳಲ್ಲಿ ಮೂಡಿ ಬಂದಾಗ ನಾವು ಪಡೆದ ಸ್ವಾತಂತ್ರ್ಯ ಸಾರ್ಥಕವಾಗುತ್ತದೆ. ಹರ್ ಘರ್ ತಿರಂಗಾ ಅಭಿಯಾನ ದೇಶವಾಸಿಗಳಲ್ಲಿ ರಾಷ್ಟ್ರಪ್ರೇಮ ಬೆಸೆಯುವ ವಿಶೇಷ ಕಾರ್ಯಕ್ರಮವಾಗಿದೆ ಎಂದು ಹರ್ ಘರ್ ತಿರಂಗಾ ಅಭಿಯಾನದ ರಾಜ್ಯ ಸಂಚಾಲಕಿ ರೂಪಾಲಿ ನಾಯ್ಕ ಹೇಳಿದರು.
ಭಾರತೀಯ ಜನತಾ ಪಕ್ಷದ ಜಿಲ್ಲಾ ಯುವ ಮೋರ್ಛಾ ಮತ್ತು ಕಾರವಾರ ನಗರ ಮತ್ತು ಗ್ರಾಮೀಣ ಮಂಡಲಗಳ ವತಿಯಿಂದ ಮನೆ ಮನೆಗೆ ತಿರಂಗಾ ಅಭಿಯಾನದ ಪ್ರಯುಕ್ತ ಆಯೋಜಿಸಲಾಗಿದ್ದ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡು, ದೇಶ ಸೇವೆ ಸಲ್ಲಿಸಿ ವಿಶ್ರಾಂತ ಜೀವನ ನಡೆಸುತ್ತಿರುವ ಯೋಧರನ್ನು ಗೌರವಿಸಿ ಮಾತನಾಡಿದ ಅವರು, ದೇಶದ ಪ್ರತಿ ಮನೆಗಳ ಮೇಲೆ ತ್ರಿವರ್ಣಧ್ವಜ ಧ್ವಜ ಹಾರುವುದರೊಂದಿಗೆ ದೇಶದ ಸಮಗ್ರತೆ ಮತ್ತು ಏಕತೆಯನ್ನು ಹರ್ ಘರ್ ತಿರಂಗಾ ಅಭಿಯಾನ ಬಲಪಡಿಸಲಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪದಿಂದ ಆರಂಭವಾದ ಹರ್ ಘರ್ ತಿರಂಗಾ ಅಭಿಯಾನ ವಿಕಸಿತ ಭಾರತದ ಕನಸನ್ನು ಸಾಕಾರಗೊಳಿಸಲು ದೇಶವಾಸಿಗಳಿಗೆ ಪ್ರೇರಣೆಯಾಗಲಿದೆ ಎಂದ ಅವರು, ಪ್ರತಿಯೊಬ್ಬರೂ ತಮ್ಮ ಮನೆಗಳ ಮೇಲೆ ಧ್ವಜ ಹಾರಿಸುವ ಮೂಲಕ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಆದರೆ ಧ್ವಜದ ಗೌರವಕ್ಕೆ ಯಾವುದೇ ರೀತಿಯ ಧಕ್ಕೆ ಆಗದಂತೆ ಗಮನ ಹರಿಸಬೇಕು ಎಂದರು.
ಭಾರತೀಯ ಜನತಾ ಪಕ್ಷದ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಮಾತನಾಡಿ, ಪ್ರತಿ ಮನೆಗಳ ಮೇಲೆ ತ್ರಿವರ್ಣಧ್ವಜ ಹಾರಿಸುವ ದೇಶದ ಪ್ರಧಾನಿಗಳ ಕನಸಿನ ಅಭಿಯಾನ ದೇಶವಾಸಿಗಳಿಗೆ ಹೆಮ್ಮೆಯಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ:
ಮಾಲಾದೇವಿ ಮೈದಾನದಿಂದ ಆರಂಭಗೊಂಡ ಬೈಕ್ ರ್ಯಾಲಿ, ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಪುನಃ ಮಾಲಾದೇವಿ ಮೈದಾನದಲ್ಲಿ ಕೊನೆಗೊಂಡಿತು, ಭಾರತೀಯ ಜನತಾ ಪಕ್ಷದ ಜಿಲ್ಲಾ ಯುವ ಮೋರ್ಛಾ ಪದಾಧಿಕಾರಿಗಳು,ಕಾರವಾರ ನಗರ ಮತ್ತು ಗ್ರಾಮೀಣ ಮಂಡಲಗಳ ಪ್ರಮುಖರು ಪಾಲ್ಗೊಂಡಿದ್ದರು.



