Sunday, December 10, 2023

Latest Posts

ಕಲ್ಯಾಣ ಕರ್ನಾಟಕ ಭಾಗದ ವೈದ್ಯಕೀಯ ಕಾಲೇಜುಗಳಿಗೆ ವಿಶೇಷ ಸ್ಥಾನಮಾನ: ಸಚಿವ ಡಾ.ಪಾಟೀಲ್

ಹೊಸದಿಗಂತ ವರದಿ,ಬಳ್ಳಾರಿ:

ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿನ ವೈದ್ಯಕೀಯ ಕಾಲೇಜುಗಳಿಗೆ ಮೂಲಭೂತ ಸೌಕರ್ಯ ಹಾಗೂ ವಿಶೇಷ ಸ್ಥಾನಮಾನ ಕಲ್ಪಿಸಿಕೊಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಶರಣಪ್ರಕಾಶ ಆರ್.ಪಾಟೀಲ ಅವರು ಹೇಳಿದರು.

ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಶಸ್ತ್ರ ಚಿಕಿತ್ಸೆ ಸಂಕೀರ್ಣ ವಿಭಾಗ, ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ, ಕಿಮೋಥೆರಪಿ ವಿಭಾಗಗಳಿಗೆ ಭಾನುವಾರ ಭೇಟಿ ಹಾಗೂ ಪರಿಶೀಲನೆ ನಡೆಸಿ ಹಾಗೂ ಇನ್ನಿತರೆ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ನಡೆಸಿ ಮಾಧ್ಯಮದವರ ಜೊತೆ ಮಾತನಾಡಿದರು.

ವಿಮ್ಸ್ ಬಹಳ ಹಳೆಯ ಕಾಲೇಜು ಸಂಸ್ಥೆಯಾಗಿದ್ದು, ಇದರ ಅಭಿವೃದ್ಧಿಗೆ ಸರ್ಕಾರದಿಂದ ವರ್ಷವಾರು ಅನುದಾನ ಒದಗಿಸಲಾಗುತ್ತಿದೆ. ಅನುದಾನದಲ್ಲಿ ಯಾವುದೇ ರೀತಿಯ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ವಿಜಯನಗರ ಜಿಲ್ಲೆಯಲ್ಲಿ ನೂತನ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಉದ್ದೇಶಿಸಲಾಗಿದೆ ಎಂದರು.

ವಿಮ್ಸ್‍ನಲ್ಲಿ ಇತ್ತೀಚಿನ ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿದಂತೆ, ರೋಸ್ಟರ್ ಮೆರಿಟ್ ಹಾಗೂ ಪದೋನ್ನತಿ ಆಧಾರದ ಮೇಲೆ ನೇಮಕಕ್ಕೆ ಸರ್ಕಾರ ಮಟ್ಟದ ಚರ್ಚೆಯ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದಕ್ಕೂ ಮುನ್ನ ಸಚಿವರು, ಸಂಸ್ಥೆಯ ಆವರಣದಲ್ಲಿನ ಸಾರ್ವಜನಿಕರ ಬಳಿ ಆಸ್ಪತ್ರೆಯಲ್ಲಿ ಲಭಿಸುವ ಚಿಕಿತ್ಸೆ ಕುರಿತು ಮಾಹಿತಿ ಪಡೆದರು. ವಿವಿಧ ವಾರ್ಡ್‍ಗಳಿಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಕುಶಲೋಪರಿ ವಿಚಾರಿಸಿದರು.

ನಂತರ, ಕೆಎಂಇಆರ್‍ಸಿ ಅನುದಾನದಲ್ಲಿ 3828 ಲಕ್ಷ ರೂ.ಗಳಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಅಧ್ಯಾಪಕರ ಸಭಾಂಗಣ, 300 ವಿದ್ಯಾರ್ಥಿಗಳ ಸಾಮಥ್ರ್ಯವುಳ್ಳ ಪರೀಕ್ಷಾ ಕೊಠಡಿಗಳ ಕಾಮಗಾರಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಮಹಾನಗರ ಪಾಲಿಕೆ ಮೇಯರ್ ಡಿ.ತ್ರಿವೇಣಿ, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ವಿಮ್ಸ್ ನಿರ್ದೇಶಕ ಡಾ.ಗಂಗಾಧರ ಗೌಡ ಸೇರಿದಂತೆ ಜಿ.ಪಂ.ಮಾಜಿ ಸದಸ್ಯರಾದ ಮುಂಡರಗಿ ನಾಗರಾಜ್, ಅಲ್ಲಂ ಪ್ರಶಾಂತ್, ಇತರರಿದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!