ಎಗ್ ಪೆಪ್ಪರ್ ಫ್ರೈ ಅತ್ಯಂತ ರುಚಿಕರವಾದ, ಖಾರವಾದ ಮತ್ತು ಕೇವಲ 5 ರಿಂದ 10 ನಿಮಿಷಗಳಲ್ಲಿ ಮಾಡಬಹುದಾದ ಅತ್ಯಂತ ಸುಲಭವಾದ ಸೈಡ್ ಡಿಶ್ ಆಗಿದೆ. ಚಪಾತಿ, ರೊಟ್ಟಿ ಅಥವಾ ಬಿಸಿಬಿಸಿ ರಸಂ ಅನ್ನದ ಜತೆ ತಿನ್ನಲು ಇದು ಅತ್ಯುತ್ತಮ ಕಾಂಬಿನೇಷನ್.
ಬೇಕಾಗುವ ಸಾಮಗ್ರಿಗಳು:
ಬೇಯಿಸಿದ ಮೊಟ್ಟೆಗಳು
ಕರಿಮೆಣಸಿನ ಪುಡಿ
ಜೀರಿಗೆ ಪುಡಿ
ಅರಿಶಿನ ಪುಡಿ
ಗರಂ ಮಸಾಲ ಪುಡಿ
ಈರುಳ್ಳಿ
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಕರಿಬೇವು ಮತ್ತು ಕೊತ್ತಂಬರಿ ಸೊಪ್ಪು
ಎಣ್ಣೆ ಅಥವಾ ಬೆಣ್ಣೆ
ಉಪ್ಪು
ಮಾಡುವ ವಿಧಾನ
ಮೊದಲಿಗೆ ಒಂದು ತವಾಕ್ಕೆ 1 ಚಮಚ ಎಣ್ಣೆ, ಸ್ವಲ್ಪ ಅರಿಶಿನ, ಸ್ವಲ್ಪ ಪೆಪ್ಪರ್ ಪುಡಿ ಮತ್ತು ಉಪ್ಪು ಹಾಕಿ. ಅದರಲ್ಲಿ ಬೇಯಿಸಿ ಕತ್ತರಿಸಿದ ಮೊಟ್ಟೆಗಳನ್ನು ಇಟ್ಟು ಎರಡೂ ಬದಿ 1-2 ನಿಮಿಷ ಫ್ರೈ ಮಾಡಿ ಒಂದು ತಟ್ಟೆಗೆ ಎತ್ತಿಟ್ಟುಕೊಳ್ಳಬೇಕು. ನಂತರ ಅದೇ ಬಾಣಲೆಗೆ ಉಳಿದ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಸಾಸಿವೆ, ಕರಿಬೇವು ಮತ್ತು ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಚೆನ್ನಾಗಿ ಹುರಿದು, ಈರುಳ್ಳಿ ಬೆಂದ ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಕೈಯಾಡಿಸಿ. ನಂತರ ಜೀರಿಗೆ ಪುಡಿ, ಗರಂ ಮಸಾಲ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಕ್ಸ್ ಮಾಡಿ. ಬಳಿಕ ಜಜ್ಜಿದ ಕರಿಮೆಣಸಿನ ಪುಡಿಯನ್ನು ಹಾಕಿ, ನಂತರ ಈ ಮಸಾಲೆಗೆ ಮೊದಲೇ ಫ್ರೈ ಮಾಡಿಟ್ಟುಕೊಂಡ ಮೊಟ್ಟೆಗಳನ್ನು ಹಾಕಿ, ಮಸಾಲೆ ಮೊಟ್ಟೆಯ ಎಲ್ಲಾ ಕಡೆ ಚೆನ್ನಾಗಿ ಅಂಟಿಕೊಳ್ಳುವಂತೆ ಲಘುವಾಗಿ ಕೈಯಾಡಿಸಿ. 2 ನಿಮಿಷ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಿಸಿ.ಕೊನೆಯದಾಗಿ ಮೇಲಿನಿಂದ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ಎಗ್ ಪೆಪ್ಪರ್ ಫ್ರೈ ಸವಿಯಲು ಸಿದ್ಧ!



