Monday, September 26, 2022

Latest Posts

ತವರಿನಲ್ಲೇ ಬಲಿಷ್ಠ ಆಸ್ಟ್ರೇಲಿಯಾವನ್ನು ಮಣಿಸಿ ಇತಿಹಾಸ ಬರೆದ ಜಿಂಬಾಬ್ವೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಆಸ್ಟ್ರೇಲಿಯಾ ನೆಲದಲ್ಲಿ ಮೊಟ್ಟ ಮೊದಲ ಬಾರಿಗೆ ಏಕದಿನ ಪಂದ್ಯವನ್ನು ಗೆಲ್ಲುವ ಮೂಲಕ ಜಿಂಬಾಬ್ವೆ ಕ್ರಿಕೆಟ್ ತಂಡ ಇತಿಹಾಸ ಬರೆದಿದೆ. ತೃತೀಯ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಜಿಂಬಾಬ್ವೆ ಮೂರು ವಿಕೆಟ್‌ಗಳಿಂದ ಆಸ್ಟ್ರೇಲಿಯಾ ತಂಡವನ್ನು ಸೋಲಿಸುವ ಮೂಲಕ ನಿಬ್ಬೆರಗಾಗಿಸಿದೆ. ಲೆಗ್ ಸ್ಪಿನ್ನರ್ ರಿಯಾನ್ ಬರ್ಲ್ (5-10) ಮಾರಕ ದಾಳಿಗೆ ಕಂಗಾಲಾದ ಆತಿಥೇಯರು ಕೇವಲ 141 ರನ್‌ಗಳಿಗೆ ಆಲೌಟ್‌ ಆದರು. ಜಿಂಬಾಬ್ವೆ 39 ನೇ ಓವರ್‌ನಲ್ಲಿ ಗುರಿಯನ್ನು ಬೆನ್ನಟ್ಟಿ ವಿಜಯೋತ್ಸವ ಆಚರಿಸಿತು. ಕೊನೆಯ ಪಂದ್ಯದಲ್ಲಿ ಜಿಂಬಾಬ್ವೆ ಗೆದ್ದರೂ, ಮೊದಲ ಎರಡು ಪಂದ್ಯದಲ್ಲಿ ಜಯ ಸಾಧಿಸಿದ್ದ ಆಸಿಸ್ 2-1 ಅಂತರದಿಂದ ಸರಣಿ ಗೆದ್ದುಕೊಂಡಿದೆ.
ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಗೆ ಇಳಿದ ಆಸ್ಟ್ರೇಲಿಯಾ ಇಳಿದ ಆಸ್ಟ್ರೇಲಿಯಾ ಜಿಂಬಾಬ್ವೆ ಬಿಗಿ ಬೌಲಿಂಗ್ ದಾಳಿಗೆ ನಲುಗಿ 31 ಓವರ್​ಗಳಲ್ಲಿ ಕೇವಲ 141ರನ್​ ಗಳನ್ನು ಕಲೆಹಾಕುವಷ್ಟರಲ್ಲಿ ಮುಕ್ತಾಯಗೊಂಡಿತು. ಡೇವಿಡ್ ವಾರ್ನರ್ (94 ರನ್) ಆಸಿಸ್‌ ಪರ ಏಕಾಂಗಿ ಹೋರಾಟ ನಡೆಸಿದರು. ತಂಡ ಕಲೆಹಾಕಿದ ಮೊತ್ತದಲ್ಲಿ ಬಹುಪಾಲು ರನ್ ವಾರ್ನರ್ ಅವರೇ ಕಲೆಹಾಕಿದರು. ವಾರ್ನರ್‌ ಹೊರತು ಪಡಿಸಿದರೆ ಗ್ಲೆನ್ ಮ್ಯಾಕ್ಸ್​ವೆಲ್ 19 ರನ್ ಗಳಿಸಿ ಕೊಂಚ ಪ್ರತಿರೋಧ ಒಡ್ಡಿದರು.
ಪ್ರವಾಸಿ ಜಿಂಬಾಬ್ವೆ ಬ್ಯಾಟರ್‌ ಗಳು ಚೇಸಿಂಗ್ ಅನ್ನು ಆಕರ್ಷಕವಾಗಿ ಪ್ರಾರಂಭಿಸಿದರು. ತಕುಡ್ಜ್ವಾನಾಶೆ ಕೈಟಾನೊ ಮತ್ತು ತಡಿವಾನಾಶೆ ಮರುಮಾನಿ 38 ರನ್ ಆರಂಭಿಕ ಜೊತೆಯಾಟವನ್ನು ನಡೆಸಿದರು. ಆ ಬಳಿಕ ಹಟಾತ್‌ ಕುಸಿತ ಕಂಡ ಜಿಂಬಾಬ್ವೆ 77-5 ವಿಕೆಟ್‌ ಕಳೆದುಕೊಂದು ಸಂಕಷ್ಟದಲ್ಲಿತ್ತು. ಆ ಬಳಿಕ ಜೊತೆಯಾದ ಚಕಬ್ವಾ ಹಾಗೂ ಬರ್ಲ್‌ ತಂಡವನ್ನು ವಿಜಯದ ಗೆರೆ ಮುಟ್ಟಿಸಿದರು. ಆಸಿಸ್‌ ಪರ ಹೆಜಲ್‌ ವುಡ್‌ ಮೂರು ವಿಕೆಟ್‌ ಕಬಳಿಸಿದರು.
ಈ ವಿಜಯವು ವಿಶ್ವಕಪ್‌ ಅರ್ಹತೆ ಪಡೆಯಲು ಹೋರಾಟ ನಡೆಸುತ್ತಿರುವ ಜಿಂಬಾಬ್ವೆ  ಪ್ರಯತ್ನಕ್ಕೆ ತಂಪನ್ನೆರೆದಿದೆ. ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ 50-ಓವರ್ ವಿಶ್ವಕಪ್‌ಗೆ ಅರ್ಹತೆಗೆ ಜಿಂಬಾಬ್ವೆ ಮುಂದಿನ ಪ್ರತಿಯೊಂದು ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡುವುದು ಅವಶ್ಯಕವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!