ಮಹಿಳಾ ವಿಶ್ವ ಬಾಕ್ಸಿಂಗ್‌ ಚಾಂಪಿಯನ್​ಶಿಪ್​​ನಲ್ಲಿ ಭಾರತಕ್ಕೆ ಚಿನ್ನ ಗೆದ್ದುಕೊಟ್ಟ ನಿಖತ್‌ ಜರಿನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಇಸ್ತಾನ್‌ಬುಲ್‌ನಲ್ಲಿ ನಡೆದ ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತದ ಬಾಕ್ಸರ್ ನಿಖತ್ ಜರೀನ್ ಚಿನ್ನ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಫ್ಲೈವೇಟ್ (52 ಕೆಜಿ) ವಿಭಾಗದಲ್ಲಿ ಥಾಯ್ಲೆಂಡ್‌ನ ಜಿಟ್‌ಪಾಂಗ್ ಜುಟಾಮಾಸ್ ವಿರುದ್ಧ 5-0 ಸುಲಭ ಜಯ ಸಾಧಿಸುವ ಮೂಲಕ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ತೆಲಂಗಾಣ ಮೂಲದ ಬಾಕ್ಸರ್ ನಿಖತ್ ಜರೀನ್ ಟೂರ್ನಿಯುದ್ಧಕ್ಕೂ ತನ್ನ ಎಲ್ಲಾ ಪ್ರತಿಸ್ಪರ್ಧಿಗಳ ಮೇಲೆ ಅದ್ಭುತ ಪ್ರಾಬಲ್ಯ ಸಾಧಿಸಿ ಅಧಿಕಾರಯುತವಾಗಿ ಫೈನಲ್‌ಗೇರಿದ್ದರು. ಪ್ರಶಸ್ತಿ ಸುತ್ತಿನಲ್ಲಿಯೂ ಮಿಂಚಿದ ಜರಿನ್‌ ಎದುರಾಳಿ ಥಾಯ್ಲೆಂಡ್‌ ನ ಜುಟಾಮಾಸ್ ವಿರುದ್ಧ 30-27, 29-28, 29-28, 30-27, 29-28 ಅಂಕಗಳಿಂದ ಗೆದ್ದು ಬೀಗಿದರು.

2019 ರ ಏಷ್ಯನ್ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತೆಯೂ ಆಗಿರುವ ಜರೀನ್, ಈ ಗೆಲುವಿನೊಂದಿಗೆ ವಿಶ್ವ ಚಾಂಪಿಯನ್ ಕಿರೀಟವನ್ನು ಅಲಂಕರಿಸಿದ ಐದನೇ ಭಾರತೀಯ ಮಹಿಳಾ ಬಾಕ್ಸರ್ ಎಂಬ ಸಾಧನೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು.
ಆರು ಬಾರಿಯ ಚಾಂಪಿಯನ್ ಮೇರಿ ಕೋಮ್ (2002, 2005, 2006, 2008, 2010 ಮತ್ತು 2018) ಸರಿತಾ ದೇವಿ (2006), ಜೆನ್ನಿ ಆರ್‌ಎಲ್ (2006) ಮತ್ತು ಲೇಖಾ ಕೆಸಿ (2006) ಅವರು ವಿಶ್ವ ಪ್ರಶಸ್ತಿಯನ್ನು ಗೆದ್ದ ಇತರ ಭಾರತೀಯ ಬಾಕ್ಸರ್‌ ಗಳು.
ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್ ನಲ್ಲಿ ಭಾರತಕ್ಕೆ ನಾಲ್ಕು ವರ್ಷಗಳಲ್ಲಿ ಇದು ಮೊದಲ ಚಿನ್ನದ ಪದಕವಾಗಿದೆ. ಮೇರಿ ಕೋಮ್ (48 ಕೆಜಿ) 2018 ರಲ್ಲಿ ಕೊನೆಯ ಪ್ರಶಸ್ತಿಯನ್ನು ಗೆದ್ದಿದ್ದರು. ಜುಟಮಾಸ್ ವಿರುದ್ಧ ಜರೀನ್‌ಗೆ ಇದು ಎರಡನೇ ಗೆಲುವು. ಇದಕ್ಕೂ ಮುನ್ನ 2019 ರ ಥಾಯ್ಲೆಂಡ್ ಓಪನ್‌ನಲ್ಲಿಯೂ ಜರಿನ್‌ ಗೆದ್ದಿದ್ದರು. ಜರಿನ್‌ ಈವರ್ಷ ಅತ್ಯುತ್ತಮ ಲಯದಲ್ಲಿದ್ದಾರೆ. ಫೆಬ್ರವರಿಯಲ್ಲಿ ನಡೆದ ಪ್ರತಿಷ್ಠಿತ ಸ್ಟ್ರಾಂಡ್ಜಾ ಸ್ಮಾರಕ ಬಾಕ್ಸಿಂಗ್ ಟೂರ್ನಿಮೆಂಟ್‌ ನಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳಾ ಬಾಕ್ಸರ್ ಎನಿಸಿಕೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!