ಕ್ರೀಡಾ ವಿವಿ ಆರಂಭಕ್ಕೆ ಎಲ್ಲಾ ರೀತಿಯ ಪ್ರಯತ್ನ: ಅಪ್ಪಚ್ಚು ರಂಜನ್

ಹೊಸ ದಿಗಂತ ವರದಿ, ಮಡಿಕೇರಿ:

ಕೊಡಗು ಜಿಲ್ಲೆಯಲ್ಲಿ ಕ್ರೀಡಾ ವಿಶ್ವವಿದ್ಯಾನಿಲಯ ಆರಂಭಕ್ಕೆ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗಿದ್ದು, ಸರ್ಕಾರದ ಹಂತದಲ್ಲಿ ಗಮನ ಸೆಳೆಯಲಾಗಿದೆ ಎಂದು ಎಂ.ಪಿ.ಅಪ್ಪಚ್ಚು ರಂಜನ್ ಅವರು ತಿಳಿಸಿದ್ದಾರೆ.
ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ 2021-22 ನೇ ಸಾಲಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಎರಡು ದಿನಗಳ ಕ್ರೀಡಾ ತರಬೇತಿ ಶಿಬಿರ ಹಾಗೂ ಯುವ ಸಂಘಗಳಿಗೆ ಮತ್ತು ಶಾಲೆಗಳಿಗೆ ‘ಕ್ರೀಡಾ ಕಿಟ್’ ವಿತರಿಸಿ ಶುಕ್ರವಾರ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಶೀಘ್ರ ಕ್ರೀಡಾ ವಿಶ್ವವಿದ್ಯಾಲಯ ಆರಂಭಕ್ಕೆ ಎಲ್ಲಾ ರೀತಿಯ ಪ್ರಯತ್ನಗಳು ನಡೆದಿವೆ. ಕ್ರೀಡಾ ವಿವಿ ಆರಂಭದಿಂದ ಇಲ್ಲಿನ ಯುವ ಜನರು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಹಕಾರಿ ಆಗಲಿದೆ ಎಂದು ಅಪ್ಪಚ್ಚು ರಂಜನ್ ಅವರು ತಿಳಿಸಿದರು.
ಕೊಡಗು ವೀರರ ನಾಡು, ಕ್ರೀಡೆಯ ಬೀಡು ಆಗಿದ್ದು, ಸಾಧಿಸುವ ಗುರಿ ಮತ್ತು ಛಲ ಇದ್ದರೆ ಮಾತ್ರ ಕ್ರೀಡೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ 3 ಹಾಕಿ ಟರ್ಫ್ ಮೈದಾನಗಳಿವೆ. ಕೊಡಗು ಜಿಲ್ಲೆ ಕ್ರೀಡೆ ಹಾಗೂ ಸೇನಾ ಕ್ಷೇತ್ರದಲ್ಲಿ ಹೆಸರು ಮಾಡಿದೆ. ನಾನು ಕೂಡ ಒಬ್ಬ ಕ್ರೀಡಾಪಟುವಾಗಿದ್ದೇನೆ ಎಂದು ಅಪ್ಪಚ್ಚು ರಂಜನ್ ನುಡಿದರು.
ಬಡವರ್ಗದಿಂದ ಬಂದವರು ಕ್ರೀಡೆಯಲ್ಲಿ ಹೆಚ್ಚು ಹೆಸರು ಮಾಡಿದ್ದಾರೆ. ಆ ನಿಟ್ಟಿನಲ್ಲಿ ಬಡ ಪ್ರತಿಭಾವಂತರನ್ನು ಗುರುತಿಸಲು ಕ್ರೀಡಾ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕರು ತಿಳಿಸಿದರು.
ಹಳ್ಳಿಗಾಡಿನವರು ಒಲಂಪಿಕ್ಸ್ ಹಾಗೂ ಇತರ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ. ಹಾಗಾಗಿ ತಮ್ಮ ಪ್ರತಿಭೆಯನ್ನು ವಿಕಸನಗೊಳಿಸಿ, ರಾಜ್ಯಕ್ಕೆ ಹಾಗೂ ದೇಶಕ್ಕೆ ಹೆಸರು ತರುವಂತಾಗಬೇಕು ಎಂದರು.
ಕ್ರೀಡಾಂಗಣ ಅಭಿವೃದ್ಧಿಗೆ 9.13ಕೋಟಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎಸ್.ಗುರುಸ್ವಾಮಿ ಅವರು ಮಾತನಾಡಿ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗೆ 9.13 ಕೋಟಿ ರೂ.ಗಳ ಅಂದಾಜು ಪಟ್ಟಿಯನ್ನು ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಸೋಮವಾರಪೇಟೆಯಲ್ಲಿ ನಿರ್ಮಾಣವಾಗುತ್ತಿರುವ ಹಾಕಿ ಟರ್ಫ್ ಹೆಚ್ಚುವರಿ ಕಾಮಗಾರಿಗೆ ಅಗತ್ಯ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಾಗೆಯೇ ಜಿಲ್ಲೆಯ ತಾಲೂಕು ಮಟ್ಟದ ಎಲ್ಲಾ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲು ಕ್ರಮವಹಿಸಲಾಗಿದೆ ಎಂದು ಗುರುಸ್ವಾಮಿ ಅವರು ಮಾಹಿತಿ ನೀಡಿದರು.
ಶಿಬಿರಾರ್ಥಿಗಳಿಗೆ ಟ್ರ್ಯಾಕ್ ಸೂಟ್, ಶಟಲ್ ಬ್ಯಾಡ್ಮಿಂಟನ್ ರಾಕೆಟ್, ವಾಲಿಬಾಲ್, ಫುಟ್‍ಬಾಲ್, ಥ್ರೋಬಾಲ್, ಟೆನ್ನಿಸ್ ಬಾಲ್, ಸ್ಕಿಪ್ಪಿಂಗ್ ರೋಪ್ ಸೇರಿದಂತೆ ಕ್ರೀಡಾ ಸಾಮಗ್ರಿಗಳ ಕಿಟ್ ವಿತರಿಸಲಾಯಿತು. ಅಥ್ಲೆಟಿಕ್ ತರಬೇತುದಾರರಾದ ಮಹಾಬಲ. ಕೆ ಅವರು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!