May 7, 2026
Thursday, May 7, 2026
spot_img

ಪಂಜಾಬ್ ಕಿಂಗ್ಸ್‌ಗೆ ‘ಕೈಕೊಟ್ಟ’ ಫೀಲ್ಡಿಂಗ್: ಸನ್‌ರೈಸರ್ಸ್‌ಗೆ 33 ರನ್‌ಗಳ ಭರ್ಜರಿ ಜಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಸಕ್ತ ಐಪಿಎಲ್ ಆವೃತ್ತಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವು ತನ್ನ ಭರ್ಜರಿ ಫಾರ್ಮ್ ಮುಂದುವರಿಸಿದೆ. ತವರಿನ ಮೈದಾನದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 33 ರನ್‌ಗಳ ಅಂತರದಿಂದ ಸೋಲಿಸಿ ಮಿಂಚಿದೆ. ಕಳಪೆ ಫೀಲ್ಡಿಂಗ್ ಮತ್ತು ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯ ಪಂಜಾಬ್ ಪಾಲಿಗೆ ಮುಳುವಾಯಿತು.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಹೈದರಾಬಾದ್, ಅಕ್ಷರಶಃ ರನ್‌ ಮಳೆ ಸುರಿಸಿತು. ಆರಂಭಿಕರಾದ ಅಭಿಷೇಕ್ ಶರ್ಮಾ (35) ಮತ್ತು ಟ್ರಾವಿಸ್ ಹೆಡ್ (38) ಜೋಡಿ ಮೊದಲ ವಿಕೆಟ್‌ಗೆ ಅರ್ಧಶತಕದ ಜೊತೆಯಾಟವಾಡಿ ಭದ್ರ ಬುನಾದಿ ಹಾಕಿಕೊಟ್ಟರು. ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಕಿಶನ್ ಮತ್ತು ಹೆನ್ರಿ ಕ್ಲಾಸೆನ್ ಪಂಜಾಬ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಕ್ಲಾಸೆನ್ ಸ್ಫೋಟಕ 69 ರನ್ ಬಾರಿಸಿದರೆ, ಇಶಾನ್ ಕಿಶನ್ ಜವಾಬ್ದಾರಿಯುತ ಅರ್ಧಶತಕ ಸಿಡಿಸಿದರು. ಅಂತಿಮವಾಗಿ ನಿತೀಶ್ ಕುಮಾರ್ ರೆಡ್ಡಿ (ಔಟಾಗದೆ 29) ನೆರವಿನಿಂದ ಹೈದರಾಬಾದ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 235 ರನ್‌ಗಳ ಬೃಹತ್ ಮೊತ್ತ ಪೇರಿಸಿತು.

ಪಂದ್ಯದ ಪ್ರಮುಖ ತಿರುವು ಎಂದರೆ ಪಂಜಾಬ್ ಕಿಂಗ್ಸ್ ತಂಡದ ಕಳಪೆ ಫೀಲ್ಡಿಂಗ್. ಇಶಾನ್ ಕಿಶನ್ ಮತ್ತು ಕ್ಲಾಸೆನ್ ನೀಡಿದ ಮೂರು ಪ್ರಮುಖ ಕ್ಯಾಚ್‌ಗಳನ್ನು ಕೈಚೆಲ್ಲಿದ ಪಂಜಾಬ್, ದೊಡ್ಡ ಬೆಲೆ ತೆರಬೇಕಾಯಿತು. ಸಿಕ್ಕ ಜೀವದಾನಗಳನ್ನು ಸರಿಯಾಗಿ ಬಳಸಿಕೊಂಡ ಹೈದರಾಬಾದ್ ಬ್ಯಾಟರ್‌ಗಳು ಸ್ಕೋರ್ ಬೋರ್ಡ್ ಅನ್ನು ಹಿಗ್ಗಿಸಿದರು.

ಬೃಹತ್ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಆರಂಭದಲ್ಲೇ ಆಘಾತ ಅನುಭವಿಸಿತು. ಕೇವಲ 23 ರನ್ ಗಳಿಸುವಷ್ಟರಲ್ಲಿ ಪ್ರಿಯಾಂಶ್ ಆರ್ಯ, ಪ್ರಭಸಿಮ್ರಾನ್ ಸಿಂಗ್ ಮತ್ತು ಶ್ರೇಯಸ್ ಅಯ್ಯರ್ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಈ ಹಂತದಲ್ಲಿ ಕ್ರೀಸ್‌ಗಿಳಿದ ಕೂಪರ್ ಕೊನೋಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 59 ಎಸೆತಗಳಲ್ಲಿ 7 ಫೋರ್ ಹಾಗೂ 8 ಸಿಕ್ಸರ್ ನೆರವಿನಿಂದ 107 ರನ್ ಸಿಡಿಸಿ ಏಕಾಂಗಿ ಹೋರಾಟ ನಡೆಸಿದರು.

ಮಾರ್ಕಸ್ ಸ್ಟೊಯಿನಿಸ್ (28), ಸೂರ್ಯಾಂಶ್ ಶೆಡ್ಜ್ (25) ಅಲ್ಪ ಕಾಣಿಕೆ ನೀಡಿದರೂ, ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಪಂಜಾಬ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿ ಸೋಲೊಪ್ಪಿಕೊಂಡಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !