ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ದೇಶಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಮನೆಮಾಡಿದ್ದು, ಅದೇ ರೀತಿ ಸಾಂಸ್ಕೃತಿಕ ನಗರಿ ಮೈಸೂರಿನ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ಈ ಬಾರಿಯ ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಗಿದೆ.
ದಿನದ 24 ಗಂಟೆಯೂ ಸಾರ್ವಜನಿಕರ ಸೇವೆ, ಕಾನೂನು ಸುವ್ಯವಸ್ಥೆ ಮತ್ತು ನಿರಂತರ ಕರ್ತವ್ಯದ ಒತ್ತಡದಲ್ಲಿ ಮುಳುಗಿರುವ ಪೊಲೀಸರು, ಜನ್ಮಾಷ್ಟಮಿಯ ದಿನದಂದು ಎಲ್ಲವನ್ನೂ ಮರೆತು ಒಟ್ಟಾಗಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು.
ತೋರಣಗಳಿಂದ ಕಂಗೋಳಿಸಿದ ಠಾಣೆ:
ಹಬ್ಬದ ಸಲುವಾಗಿ ಪೊಲೀಸ್ ಠಾಣೆಯ ಆವರಣವನ್ನು ಮಾವಿನ ಎಲೆಗಳ ತೋರಣ, ಬಣ್ಣ ಬಣ್ಣದ ಹೂವುಗಳಿಂದ ಅಲಂಕರಿಸಲಾಗಿತ್ತು. ಠಾಣೆಯ ಒಳಗಡೆ ಕೃಷ್ಣನ ವಿಗ್ರಹಕ್ಕೆ ವಿಶೇಷ ಪೂಜೆ ನೆರವೇರಿಸಲಾಯಿತು. ಠಾಣೆಯ ಎಲ್ಲಾ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸ್ಥಳೀಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೃಷ್ಣನ ಕೃಪೆಗೆ ಪಾತ್ರರಾದರು.
ಗಮನ ಸೆಳೆದ ಮುದ್ದು ಕೃಷ್ಣ:
ಈ ಬಾರಿಯ ಆಚರಣೆಯ ಪ್ರಮುಖ ಆಕರ್ಷಣೆಯೆಂದರೆ ಪುಟ್ಟ ಬಾಲಕನೊಬ್ಬನಿಗೆ ಹಾಕಲಾಗಿದ್ದ ಮುದ್ದು ಕೃಷ್ಣನ ವೇಷಭೂಷಣ. ತಲೆಯ ಮೇಲೆ ನವಿಲು ಗರಿ, ಕೈಯಲ್ಲಿ ಕೊಳಲು ಹಿಡಿದು ಠಾಣೆಯ ಆವರಣದಲ್ಲಿ ಓಡಾಡುತ್ತಿದ್ದ ಆ ಬಾಲಕ ಇಡೀ ಪೊಲೀಸ್ ಠಾಣೆಗೆ ಹಬ್ಬದ ಕಳೆಯನ್ನು ತಂದಿದ್ದಲ್ಲದೆ, ಅಲ್ಲಿ ನೆರೆದಿದ್ದ ಎಲ್ಲರ ಮುಖದಲ್ಲೂ ಮಂದಹಾಸ ಮೂಡಿಸಿದನು. ಪೊಲೀಸರು ಆ ಮುದ್ದು ಕೃಷ್ಣನಿಗೆ ಆರತಿ ಎತ್ತಿ ಸಂಭ್ರಮಿಸಿದರು.
ಇದನ್ನೂ ಓದಿ:
ಸಾಮಾನ್ಯವಾಗಿ ಸದಾ ಗಂಭೀರ ವಾತಾವರಣದಿಂದ ಕೂಡಿರುವ ಪೊಲೀಸ್ ಠಾಣೆಯು ಇಂದು ಒಂದು ಸುಂದರ ಸಾಂಸ್ಕೃತಿಕ ಕೇಂದ್ರದಂತೆ ಕಂಗೊಳಿಸುತ್ತಿತ್ತು. ಸಮಾಜದ ಶಾಂತಿಗಾಗಿ ಹಗಲಿರುಳು ಶ್ರಮಿಸುವ ಖಾಕಿ ಪಡೆ, ಇಂತಹ ಹಬ್ಬಗಳ ಮೂಲಕ ತಮ್ಮ ನಡುವಿನ ಒಗ್ಗಟ್ಟನ್ನು ವೃದ್ಧಿಸಿಕೊಳ್ಳುವುದರ ಜತೆಗೆ ಸಾರ್ವಜನಿಕರೊಂದಿಗೂ ಹಬ್ಬದ ಸಂತೋಷವನ್ನು ಹಂಚಿಕೊಂಡಿದ್ದು ನಿಜಕ್ಕೂ ವಿಶೇಷ.



