ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇ 9, 2022ರ ಘರ್ಷಣೆಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಮೇಲೆ ವಿಧಿಸಲಾಗಿದ್ದ ವಿದೇಶಿ ಪ್ರಯಾಣ ನಿಷೇಧವನ್ನು ಶ್ರೀಲಂಕಾದ ನ್ಯಾಯಾಲಯ ತೆಗೆದುಹಾಕಿದೆ. ರಾಜಪಕ್ಸೆ ಜತೆಗೆ ಸಂಸದೆ ರೋಹಿತಾ ಅಬೇಗುಣವರ್ದನಾ, ಸಚಿವೆ ಪವಿತ್ರಾ ವನ್ನಿಯಾರಾಚಿ ಹಾಗೂ ಮಾಜಿ ಪ್ರಾಂತೀಯ ಕೌನ್ಸಿಲ್ ಸದಸ್ಯೆ ಕಾಂಚನಾ ಜಯರತ್ನ ಅವರ ಮೇಲೂ ಪ್ರಯಾಣ ನಿಷೇಧ ಹೇರಲಾಗಿದ್ದು, ಇದೀಗ ಮ್ಯಾಜಿಸ್ಟ್ರೇಟ್ ಕೋರ್ಟ್ ರದ್ದುಗೊಳಿಸಿದೆ. ಮೇ 9, 2022 ರಂದು ಕೊಲಂಬೊದಲ್ಲಿ ನಡೆದ ಶಾಂತಿಯುತ ಸರ್ಕಾರಿ ವಿರೋಧಿ ಪ್ರತಿಭಟನಾಕಾರರ ಮೇಲೆ ನಡೆದ ಮಾರಣಾಂತಿಕ ದಾಳಿಯಲ್ಲಿ ಭಾಗಿಯಾಗಿರುವ ತನಿಖೆಯ ದೃಷ್ಟಿಯಿಂದ ರಾಜಪಕ್ಸೆ, ಇತರರನ್ನು ನಿಷೇಧಿಸಲಾಗಿತ್ತು.
ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸೆ, ಸಂಸದೆ ರೋಹಿತ ಅಬೇಗುಣವರ್ದನ, ಸಚಿವೆ ಪವಿತ್ರಾ ವನ್ನಿಯಾರಾಚಿ ಮತ್ತು ಮಾಜಿ ಪ್ರಾಂತೀಯ ಪರಿಷತ್ ಸದಸ್ಯೆ ಕಾಂಚನಾ ಜಯರತ್ನ ಅವರ ಮೇಲೆ ವಿಧಿಸಲಾಗಿರುವ ಪ್ರಯಾಣ ನಿರ್ಬಂಧವನ್ನು ಸಡಿಲಿಸುವಂತೆ ಮಹಿಂದಾ ಪರ ವಕೀಲ ಸವೇಂದ್ರ ಫೆರ್ನಾಂಡೋ ನ್ಯಾಯಾಲಯವನ್ನು ಕೋರಿದರು. ವಾದವನ್ನು ಆಲಿಸಿದ ಮ್ಯಾಜಿಸ್ಟ್ರೇಟ್ ಪ್ರಯಾಣ ನಿಷೇಧವನ್ನು ತೆರವು ಮಾಡಿ ಆದೇಶ ಹೊರಡಿಸಿದರು.
ಆಹಾರ ಮತ್ತು ಇಂಧನ ಸೇರಿದಂತೆ ಮೂಲಭೂತ ಅಗತ್ಯಗಳ ತೀವ್ರ ಕೊರತೆಯನ್ನು ಎದುರಿಸಿದ್ದರಿಂದ ಮಾರ್ಚ್ 2022 ರಲ್ಲಿ ಶಾಂತಿಯುತ ಪ್ರತಿಭಟನೆಗಳು ಪ್ರಾರಂಭವಾದವು. ಅಂದಿನ ಪ್ರಧಾನಿ ಮಹಿಂದಾ ರಾಜಪಕ್ಸೆ ಮೇ 9ರಂದು ಪ್ರತಿಭಟನೆಗಳಿಂದಾಗಿ ರಾಜೀನಾಮೆ ನೀಡಿದರೆ, ಅವರ ಸಹೋದರ ಗೋಟಬಯ ರಾಜಪಕ್ಸೆ ಜುಲೈ 13 ರಂದು ದೇಶದಿಂದ ಪಲಾಯನ ಮಾಡಿದ್ದರು. ಸಂಸತ್ತು ವಿಕ್ರಮಸಿಂಗ್ ಅವರನ್ನು ಜುಲೈ 20 ರಂದು ರಾಜಪಕ್ಸೆ ಅವರ ರಾಜಕೀಯ ಪಕ್ಷವಾದ ಶ್ರೀಲಂಕಾ ಪೊದುಜನ ಪೆರಮುನಾ ಬೆಂಬಲದೊಂದಿಗೆ ಹೊಸ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತು.