ಹೊಸದಿಗಂತ ಡಿಜಿಟಲ್ ಡೆಸ್ಕ್:
ದಿತ್ವಾ ಚಂಡಮಾರುತದ ಅಬ್ಬರಕ್ಕೆ ಶ್ರೀಲಂಕಾ ನಡುಗಿದೆ. ಚಂಡಮಾರುತಿಂದಾಗಿ ಉಂಟಾಗಿರುವ ಭೂಕುಸಿತ, ಪ್ರವಾಹದ ಪರಿಣಾಮ ಶ್ರೀಲಂಕಾದಲ್ಲಿ 334 ಮಂದಿ ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಭಾರತೀಯ ವಾಯುಪಡೆ ಓರ್ವ ಪಾಕ್ ಪ್ರಜೆಯನ್ನು ರಕ್ಷಿಸಿದ್ದಾರೆ.
ಶ್ರೀಲಂಕಾ ವಿಪತ್ತು ನಿರ್ವಹಣಾ ಕೇಂದ್ರದ ಮಾಹಿತಿ ಪ್ರಕಾರ, ಭಾನುವಾರ ಪ್ರವಾಹ ಹಾಗೂ ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 334ಕ್ಕೆ ತಲುಪಿದ್ದು, ಸುಮಾರು 370 ಮಂದಿ ನಾಪತ್ತೆಯಾಗಿದ್ದಾರೆ. ಇನ್ನೂ 2,66,114 ಕುಟುಂಬಗಳ 9,68,304 ಜನರು ಸಂಕಷ್ಟಕ್ಕೆ ಸಿಲುಕಿದ್ದು, ಸಂತ್ರಸ್ತರ ನೆರವಿಗಾಗಿ 919 ಪುನರ್ವಸತಿ ಕೇಂದ್ರ ಸ್ಥಾಪಿಸಲಾಗಿದೆ.
ʼಆಪರೇಷನ್ ಸಾಗರ ಬಂಧುʼ ಅಡಿಯಲ್ಲಿ ಭಾರತ ಶ್ರೀಲಂಕಾಕ್ಕೆ ನೆರವಿನ ಹಸ್ತ ಮುಂದುವರಿಸಿದ್ದು, 80 ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಜೊತೆಗೆ ಸಂತ್ರಸ್ತರಿಗೆ ಆಹಾರ, ಔಷಧ ಸೇರಿ ಅಗತ್ಯ ವಸ್ತುಗಳನ್ನು ತಲುಪಿಸಲಾಗಿದೆ. ಭಾರತೀಯ ವಾಯುಪಡೆಯ Mi-17 ಹೆಲಿಕಾಪ್ಟರ್ ನೆರವಿನಿಂದ ಶ್ರೀಲಂಕಾದಲ್ಲಿ ಸಿಲುಕಿದ್ದ 400 ಭಾರತೀಯರನ್ನು ರಕ್ಷಿಸಿ ಸ್ವದೇಶಕ್ಕೆ ಕಳಿಸಲಾಗಿದ್ದು, ಓರ್ವ ಪಾಕ್ ಪ್ರಜೆಯನ್ನು ರಕ್ಷಿಸಲಾಗಿದೆ. ಅಲ್ಲದೇ ಪೋಲೆಂಡ್, ಬೆಲಾರಸ್, ಇರಾನ್, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಜರ್ಮನಿ, ದಕ್ಷಿಣ ಆಫ್ರಿಕಾ, ಸ್ಲೊವೇನಿಯಾ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ನಾಗರಿಕರು ಸೇರಿದಂತೆ ಹಲವರನ್ನು ರಕ್ಷಣೆ ಮಾಡಿದೆ.
ದಿತ್ವಾ ಅಬ್ಬರಕ್ಕೆ ತತ್ತರಿಸಿದ ಲಂಕೆ: ಸಾವಿನ ಸಂಖ್ಯೆ 334ಕ್ಕೆ ಏರಿಕೆ, ಭಾರತೀಯರ ರಕ್ಷಣೆ

