ಹೊಸದಿಂತ ವರದಿ,ಚಿಕ್ಕಮಗಳೂರು:
ಶ್ರೀರಾಮ ಸೇನೆ ವತಿಯಿಂದ ಅಕ್ಟೋಬರ್ ೩೦ ರಿಂದ ನವೆಂಬರ್ ೫ ರ ವರೆಗೆ ದತ್ತಮಾಲಾ ಅಭಿಯಾನ ನಡೆಯಲಿದ್ದು, ದತ್ತಪೀಠಕ್ಕೆ ಸಂಬಂಧಿಸಿದಂತೆ ಪ್ರಮುಖವಾಗಿ ೭ ಬೇಡಿಕೆಗಳನ್ನು ಈಡೇರಿಸಬೇಕೆಂದು ರಾಜ್ಯ ಸರ್ಕಾರದ ಮುಂದೆ ಬೇಡಿಕೆಗಳನ್ನಿಟ್ಟಿದೆ.
ಸೋಮವಾರ ಈ ಸಂಬಂಧ ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕರಡ್ಡಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಸಂಘಟನೆಯ ವಿಭಾಗಾಧ್ಯಕ್ಷ ರಂಜಿತ್ ಶೆಟ್ಟಿ, ಕಳೆದ ೨೦ ವರ್ಷಗಳಿಂದ ಶ್ರೀರಾಮ ಸೇನೆಯು ದತ್ತಮಾಲೆ ಅಭಿಯಾನದ ಮೂಲಕ ಬೇಡಿಕೆಗಳನ್ನು ಈಡೇರಿಸಲು ಇತ್ತಾಯಿಸಿ ಹೋರಾಟ ನಡೆಸುತ್ತಿದೆ ಎಂದು ತಿಳಿಸಿದರು.
ದತ್ತಪೀಠದಲ್ಲಿ ಇಸ್ಲಾಂನ ಯಾವುದೇ ಚಟುವಟಿಕೆಗೆ ಅವಕಾಶ ನೀಡಬಾರದು. ದತ್ತ ಪೀಠದ ಪಾವಿತ್ರತೆಗೆ ಧಕ್ಕೆ ತರುವ ಗೋರಿಗಳನ್ನು ಅಲ್ಲಿಂದ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದ್ದೇವೆ ಎಂದು ತಿಳಿಸಿದರು.
ದತ್ತಪೀಠದಲ್ಲಿ ವಿಗ್ರಹ ಪ್ರತಿಷ್ಠಾಪನೆಗೆ ಕೂಡಲೇ ಕ್ರಮ ಕೈಗೊಳ್ಳಬೇಕು. ಪೀಠದಲ್ಲಿ ಅಮೂಲ್ಯ ವಿಗ್ರಹಗಳು, ಕಾಣಿಕೆ ವಸ್ತುಗಳು ಕಾಣೆಯಾಗಿರುವ ಮತ್ತು ಆಸ್ತಿಪಾಸ್ತಿ, ಅಕ್ರಮ ಹಸ್ತಾಂತರ ಹಾಗೂ ಮಾರಾಟವಾಗಿರುವ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಂಡು ಅವುಗಳನ್ನು ಪುನರ್ ಪ್ರತಿಷ್ಠಾಪಿಸಬೇಕು ಎಂದು ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
ದತ್ತಪೀಠದ ಪರಿಸರದಲ್ಲಿ ಮಾಂಸಹಾರವನ್ನು ಸಂಪೂರ್ಣ ನಿಷೇಧಿಸಬೇಕು. ಪೀಠದಲ್ಲಿ ಕಂಡುಬರುವ ಉರ್ದು ನಾಮಫಲಕಗಳನ್ನು ತೆಗೆಯಬೇಕು. ಪೀಠಕ್ಕೆ ಬರುವ ಸ್ವಾಮೀಜಿಗಳು ಹಾಗೂ ಸಾಧು ಸಂತರಿಗೆ ಪೂಜೆಗೆ ಮುಕ್ತ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದೇವೆ ಎಂದು ತಿಳಿಸಿದರು.
ದತ್ತಪೀಠದ ವ್ಯವಹಾರವನ್ನು ರಾಜ್ಯ ಸರ್ಕಾರವೇ ಬಗೆಹರಿಸಬೇಕು ಎಂದು ಸುಪ್ರೀಂ ಕೋರ್ಟ್ ಕಳೆದ ವರ್ಷವೇ ತೀರ್ಪು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಪೀಠದ ಆವರಣದಲ್ಲಿರುವ ಗೋರಿಗಳನ್ನು ನಾಗೇನಹಳ್ಳಿ ಬಾಬಾಬುಡನ್ ದರ್ಗಾಕ್ಕೆ ಸ್ಥಳಾಂತರಿಸಿ, ಪೀಠವನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕು ಎಂದು ಒತ್ತಾಯಿಸುತ್ತೇವೆ ಎಂದರು.
ಈ ಬಾರಿಯ ದತ್ತಮಾಲೆ ಅಭಿಯಾನದಲ್ಲಿ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವ ವಹಿಸಲಿದ್ದು, ಸಾಧು, ಸಂತರ ಸಮ್ಮುಖದಲ್ಲಿ ಪೀಠದಲ್ಲಿ ದತ್ತ ಪಾದುಕೆಗಳನ್ನು ದರ್ಶನ ಮಾಡಿ, ದತ್ತ ಹೋಮ, ವಿಶೇಷ ಪೂಜೆ, ಧಾರ್ಮಿಕ ಸಭೆ, ಪ್ರಸಾದ ವಿನಿಯೋಗ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಜ್ಞಾನೇಂದ್ರ ಜೈನ್, ದತ್ತಾಶ್ರಮದ ಅರ್ಚಕರಾದ ರಾಜೇಂದ್ರ ಕುಮಾರ್, ಸಮಸ್ತ ವಿಶ್ವಧರ್ಮ ರಕ್ಷಾ ಸೇವಾ ಸಂಸ್ಥಾನಂನ ಯೋಗೀಶ್ ಸಂಜಿತ್ ಸುವರ್ಣ, ಜಿಲ್ಲಾ ಗೌರವಾಧ್ಯಕ್ಷ್ಷ ಅನಿಲ್ ಆನಂದ್, ದುರ್ಗಾ ಸೇನೆ ಜಿಲ್ಲಾಧ್ಯಕ್ಷರಾದ ನವೀನ ರಂಜಿತ್ ಇತರರು ಇದ್ದರು