ಪ.ಜಾತಿ- ಪಂಗಡ ಅಭಿವೃದ್ಧಿಗೆ 28,234 ಕೋಟಿ ಬಿಡುಗಡೆ: ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ ಎಸ್.ಟಿ ಮೋರ್ಚಾ ಅಧ್ಯಕ್ಷ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿ ಮತ್ತು ವಿವಿಧ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 28,234 ಕೋಟಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುವುದಾಗಿ ಬಿಜೆಪಿ ಎಸ್.ಟಿ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ತಿಪ್ಪರಾಜ ಹವಲ್ದಾರ್ ಅವರು ತಿಳಿಸಿದರು.
ಮಲ್ಲೇಶ್ವರಂನಲ್ಲಿನ ಪಕ್ಷದ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಎಸ್‍ಸಿ ಸಮುದಾಯಕ್ಕೆ 20,112 ಕೋಟಿ ಹಾಗೂ ಎಸ್‍ಟಿ ಸಮುದಾಯಕ್ಕೆ 8,121 ಕೋಟಿ ಅನುದಾನ ನೀಡಿದ್ದಾರೆ. ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ದಲಿತ ಸಮುದಾಯಕ್ಕೆ ಬಜೆಟ್‍ನಲ್ಲಿ ಘೋಷಿಸಿದಂತೆ ಹೆಚ್ಚಿನ ಹಣ ಬಿಡುಗಡೆ ಮಾಡಿದ ಸರಕಾರಕ್ಕೆ ಕೃತಜ್ಞತೆಗಳು. ಅಲ್ಲದೆ, ಈ ಸಮುದಾಯದವರಿಗೆ 75 ಯೂನಿಟ್ ಉಚಿತ ವಿದ್ಯುತ್ ನೀಡುತ್ತಿರುವ ಇಂಧನ ಸಚಿವ ಸುನೀಲ್‍ಕುಮಾರ್ ಅವರಿಗೂ ಸಹ ಧನ್ಯವಾದ ಸಲ್ಲಿಸುವುದಾಗಿ ಅವರು ಹೇಳಿದರು.
ವಿರೋಧ ಪಕ್ಷಗಳು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ವಿಚಾರದಲ್ಲಿ ಊಹಾಪೋಹ ಹಾಗೂ ಅಂತೆಕಂತೆಗಳನ್ನು ಹರಿಯಬಿಟ್ಟು ಸಮಾಜದ ಸೌಹಾರ್ದ ಹಾಳು ಮಾಡುತ್ತಿದ್ದಾರೆ ಎಂದು ಅವರು ಆಕ್ಷೇಪಿಸಿದರು. ನವೆಂಬರ್‍ನಲ್ಲಿ ಮೋರ್ಚಾ ವತಿಯಿಂದ ರಾಜಾ ಮದಕರಿ ನಾಯ್ಕ್ ರ್ಯಾಲಿ ಮತ್ತು ಬುಡಕಟ್ಟು ಮೇಳವನ್ನು ಆಯೋಜಿಸಲಾಗುವುದು. ಚಿತ್ರದುರ್ಗದ ಕಲ್ಲಿನ ಕೋಟೆಯಿಂದ ಆರಂಭಗೊಳ್ಳಲಿರುವ ರ್ಯಾಲಿಯು ಬಳಿಕ ಸುರಪುರದತ್ತ ತೆರಳಲಿದೆ ಎಂದರು.
ಕಾಂಗ್ರೆಸ್ ಸರಕಾರವು ಕಳೆದ 7 ದಶಕಗಳಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರರ ಹೆಸರನ್ನು ಹೇಳಿಕೊಂಡು ಇಲ್ಲಿ ಆಡಳಿತ ನಡೆಸಿತ್ತು. ಆದರೆ, ಬಾಬಾ ಸಾಹೇಬರಿಗೆ ಅಂತ್ಯಸಂಸ್ಕಾರದ ವೇಳೆ ದೆಹಲಿಯಲ್ಲಿ ಒಂದು ತುಂಡು ಭೂಮಿಯನ್ನೂ ಕೊಡದೆ ಅನ್ಯಾಯ ಮಾಡಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರವು ಡಾ. ಬಾಬಾ ಸಾಹೇಬ್ ಅಂಬೇಡ್ಕರರ 5 ಸ್ಥಳಗಳನ್ನು ಗುರುತಿಸಿ ಪಂಚ ತೀರ್ಥ ಕ್ಷೇತ್ರಗಳನ್ನಾಗಿ ಅಭಿವೃದ್ಧಿ ಪಡಿಸಿದೆ ಎಂದು ಹೇಳಿದರು.
ಮಹರ್ಷಿ ವಾಲ್ಮೀಕಿ ಜಯಂತಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸರಕಾರಿ ರಜೆ ಪ್ರಕಟಿಸಿದ್ದರು. ಎಸ್‍ಟಿ ಸಮುದಾಯವನ್ನು ಬಿಜೆಪಿ ಸರಕಾರಗಳು ಗುರುತಿಸಿವೆ. ಆದಿವಾಸಿ ಗೌರವ ದಿನ ಆಚರಣೆಗೆ ಕೇಂದ್ರ ಸರಕಾರ ಮುಂದಾಗಿದೆ. ನಮ್ಮ ಸಮುದಾಯಗಳಿಗೆ ಅತಿ ಹೆಚ್ಚಿನ ಕೊಡುಗೆ ಕೊಡಲಾಗಿದೆ ಎಂದು ಮೆಚ್ಚುಗೆ ಸೂಚಿಸಿದರು. ಬಿಜೆಪಿ ನಮ್ಮ ಸಮುದಾಯವನ್ನು ಕೇವಲ ಮತಬ್ಯಾಂಕ್ ಆಗಿ ನೋಡುತ್ತಿಲ್ಲ ಎಂದರು.
ಎಸ್.ಟಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ನರಸಿಂಹ ನಾಯ್ಕ್, ರಾಜ್ಯ ಕಾರ್ಯದರ್ಶಿ ಮಹಾಂತೇಶ್ ನಾಯ್ಕ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!