Friday, June 2, 2023

Latest Posts

ನಗರಪಾಲಿಕೆಯಿಂದ ಖಾತೆ ಕಂದಾಯ ಅದಾಲತ್‌ಗೆ‌ ಚಾಲನೆ ನೀಡಿದ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್

ದಿಗಂತ ವರದಿ ಮೈಸೂರು:

ಇಲ್ಲಿನ ವಿಜಯನಗರ 3ನೇ ಹಂತದ ಖಾತೆ ಕಂದಾಯವನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮೈಸೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಕಾರ್ಯಕ್ರಮ ಹಾಗೂ ಖಾತೆ ಕಂದಾಯ ಅದಾಲತ್ ಗೆ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಂಗಳವಾರ ಚಾಲನೆ ನೀಡಿದರು.

ಸಮಾರಂಭದಲ್ಲಿ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ವಿಜಯನಗರ 3ನೇ ಹಂತದಲ್ಲಿ ಕೆಲವು ಖಾತೆಗಳು ಮುಡಾದಲ್ಲಿ ಮತ್ತೆ ಕೆಲವು ಖಾತೆಗಳು ಪಾಲಿಕೆ ವ್ಯಾಪ್ತಿಯಲ್ಲಿ ಇದ್ದವು. ಇದರಿಂದ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಕೆಲಸಗಳನ್ನು ಆಗುತ್ತಿರಲಿಲ್ಲ. ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಈ ಸಮಸ್ಯೆಯನ್ನು ಗಮನಿಸಿ, ಶಾಶ್ವತ ಪರಿಹಾರ ನೀಡಿದ್ದಾರೆ ಎಂದು ಹೇಳಿದರು.

ಉಸ್ತುವಾರಿ ಸಚಿವರ ಪ್ರಯತ್ನದ ಫಲವಾಗಿ ಮೈಸೂರು ನಗರದಲ್ಲಿ ಬೀದಿ ದೀಪಗಳಿಗೆ ಎಲ್.ಇ.ಡಿ. ಬಲ್ಬ್ ಅಳವಡಿಸಲು 109 ಕೋಟಿ ಮಂಜೂರು ಆಗಿದೆ. ಇನ್ನೂ ಅನೇಕ ಕೆಲಸಗಳು ಆಗುತ್ತಿವೆ ಎಂದು ಹೇಳಿದರು.

ವಿಜಯ ನಗರ 3ನೇ ಹಂತಕ್ಕೆ ಈಗ ಕಬಿನಿ ನೀರು ಬರುತ್ತಿದೆ. ಉಂಡುವಾಡಿ ಯೋಜನೆ ಕೂಡ ಆಗುತ್ತಿದೆ. ಈ ಯೋಜನೆ ಪೂರ್ಣಗೊಂಡರೆ ಮುಂದಿನ 50 ವರ್ಷಗಳಿಗೆ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ ಎಂದು ಹೇಳಿದರು.

ಮೈಸೂರು ನಗರದ ಮುಡಾ ವ್ಯಾಪ್ತಿಯಲ್ಲಿ ಹೊಸ ಬಡಾವಣೆಗಳಲ್ಲಿ ರಸ್ತೆ, ಒಳಚರಂಡಿ, ಕುಡಿಯುವ ನೀರು ಮುಂತಾದ ಅಭಿವೃದ್ಧಿ ಕೆಲಸಗಳನ್ನು 377 ಕೋಟಿ ರೂ.ವೆಚ್ಚದಲ್ಲಿ ತೆಗೆದುಕೊಳ್ಳಲು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು, ಸರ್ಕಾರದ ಅನುಮೋದನೆ ಕೊಡಿಸಿದರು. ಈಗ ಟೆಂಡರ್ ಆಗಿದೆ. ಫೆಬ್ರವರಿ ವೇಳೆಗೆ ಕಾಮಗಾರಿಗಳು ಆರಂಭವಾಗುತ್ತವೆ ಎಂದು ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಹೇಳಿದರು.

ಈ 377 ಕೋಟಿ ರೂ. ಅನುದಾನದಲ್ಲಿ ಮುಡಾದಿಂದ ಒಂದು ಬಾರಿಗೆ ಮಾತ್ರ ಮಾಡುವ ಕೆಲಸಗಳು ಇವೆ. ಕೆಲವು ಕಾಮಗಾರಿಗಳನ್ನು ಈಗಾಗಲೇ ಪಾಲಿಕೆಗೆ ಹಸ್ತಾಂತರಿಸಿರುವ ಬಡಾವಣೆಗಳಲ್ಲಿ ಇವೆ ಎಂದರು.
ನಗರಪಾಲಿಕೆ ವ್ಯಾಪ್ತಿಯ ಬಡಾವಣೆಗೆ ಮುಡಾ ಅನುದಾನ ಏಕೆ ಎಂದು ಸರ್ಕಾರದ ಹಂತದಲ್ಲಿ ಕೇಳಿದರು. ಕೆಲವು ಮೂಲಭೂತ ಸೌಕರ್ಯ ಒದಗಿಸುವ‌ ಮುನ್ನವೇ ಪಾಲಿಕೆಗೆ ಹಸ್ತಾಂತರಿಸಲಾಗಿದೆ. ಮುಡಾ ದಿಂದ ಆ ಕೆಲಸಗಳನ್ನು ಮಾಡುವುದು ಅನಿವಾರ್ಯ ಎಂಬುದನ್ನು ಉಸ್ತುವಾರಿ ಸಚಿವರು ಮನವರಿಕೆ ಮಾಡಿ, ಎಲ್ಲಾ ಕಾಮಗಾರಿಗಳನ್ನು ತೆಗೆದುಕೊಳ್ಳಲು ಅನುಮೋದನೆ ಕೊಡಿಸಿದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಗರಪಾಲಿಕೆ ಮೇಯರ್ ಸುನಂದಾ ಪಾಲನೇತ್ರ, ಪಾಲಿಕೆ ಆಯುಕ್ತ ಜಿ. ಲಕ್ಷ್ಮಿಕಾಂತ್ ರೆಡ್ಡಿ, ಹೆಚ್ಚುವರಿ ಆಯುಕ್ತ ಎನ್.ಎಂ.ಶಶಿಕುಮಾರ್, ಮುಡಾ ಆಯುಕ್ತ ಡಾ. ಡಿ.ಬಿ.ನಟೇಶ್, ಅಧೀಕ್ಷಕ ಇಂಜಿನಿಯರ್ ಶಂಕರ್ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!