ಇಂಡೋ-ಪಾಕ್ ಕದನಕ್ಕೆ ರೆಡಿಯಾಗುತ್ತಿದೆ ವೇದಿಕೆ: ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನಿಂದ 2023-24 ರ ವೇಳಾಪಟ್ಟಿ ರಿಲೀಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತ ಹಾಗೂ ಪಾಕಿಸ್ತಾನ ತಂಡಗಳು ಮತ್ತೊಮ್ಮೆ ಸೆಣಸಾಡಲು ವೇದಿಕೆ ಸಜ್ಜಾಗಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) 2023-24 ರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮುಂದಿನ 2 ವರ್ಷಗಳಲ್ಲಿ ಒಟ್ಟು 145 ಪಂದ್ಯಗಳ ಆಯೋಜನೆಗೆ ಎಸಿಸಿ ಯೋಜನೆ ರೂಪಿಸಿದೆ.

ಈ ವೇಳಾಪಟ್ಟಿ ಪ್ರಕಾರ ಏಷ್ಯಾಕಪ್ 2023 ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿದೆ. ಅಂದರೆ ಏಕದಿನ ವಿಶ್ವಕಪ್​ಗೂ ಒಂದು ತಿಂಗಳು ಮುಂಚಿತವಾಗಿ ಏಷ್ಯಾಕಪ್ ನಡೆಯಲಿದೆ . ಆದ್ರೆ ಏಷ್ಯಾಕಪ್ ಎಲ್ಲಿ ನಡೆಯಲಿದೆ ಎಂಬುದನ್ನು ಪ್ರಸ್ತಾಪಿಸಲಾಗಿಲ್ಲ.
ಮೂಲ ಪ್ರಕಾರ ಏಷ್ಯಾಕಪ್ ಆತಿಥ್ಯವನ್ನು ಪಾಕಿಸ್ತಾನ್ ಹೊಂದಿದ್ದು, ಆದರೆ ಪಾಕ್​ನಲ್ಲಿ ಟೂರ್ನಿ ನಡೆದರೆ ಟೀಮ್ ಇಂಡಿಯಾ ಪಾಲ್ಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಹೀಗಾಗಿ ಈ ಬಾರಿಯ ಏಷ್ಯಾಕಪ್ ತಟಸ್ಥ ಸ್ಥಳದಲ್ಲಿ ನಡೆಯುವ ಸಾಧ್ಯತೆಯಿದೆ.

ಅದೇ ರೀತಿ ಏಷ್ಯಾಕಪ್​ ಟೂರ್ನಿಗೆ ರೂಪಿಸಲಾಗಿರುವ ಗ್ರೂಪ್​ಗಳಲ್ಲಿ ಈ ಬಾರಿ ಕೂಡ ಭಾರತ-ಪಾಕಿಸ್ತಾನ್ ಒಂದೇ ಗುಂಪಿನಲ್ಲಿ. ಇದರಿಂದ ಉಭಯ ತಂಡಗಳು 3 ಬಾರಿ ಮುಖಾಮುಖಿಯಾಗಬಹುದು.

2023-24 ರಲ್ಲಿ ಒಟ್ಟು 145 ಪಂದ್ಯಗಳನ್ನು ಆಯೋಜಿಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಭರ್ಜರಿ ಪ್ಲ್ಯಾನ್ ರೂಪಿಸಿದೆ. ಇದರಲ್ಲಿ 75 ಪಂದ್ಯಗಳು ಈ ವರ್ಷ ನಡೆದರೆ, 70 ಪಂದ್ಯಗಳು 2024 ರಲ್ಲಿ ನಡೆಯಲಿವೆ. ಪುರುಷರ ಏಷ್ಯಾಕಪ್ ಅಲ್ಲದೆ, 2024 ರಲ್ಲಿ ಮಹಿಳಾ ತಂಡಗಳ ಏಷ್ಯಾಕಪ್ ಕೂಡ ನಡೆಯಲಿದೆ. ಇಲ್ಲೂ ಕೂಡ ಭಾರತ-ಪಾಕಿಸ್ತಾನ್ ತಂಡಗಳು ಒಂದೇ ಗುಂಪಿನಲ್ಲಿರುವುದು ವಿಶೇಷ.

023 ರಲ್ಲಿ ಪುರುಷರ 10 ತಂಡಗಳ 50 ಓವರ್​ನ ಚಾಲೆಂಜರ್ಸ್ ಕಪ್ ಟೂರ್ನಿ ನಡೆಯಲಿದೆ. ಈ ಟೂರ್ನಿಯಲ್ಲಿ ಏಷ್ಯನ್ ರಾಷ್ಟ್ರಗಳಾದ ಬಹ್ರೇನ್, ಸೌದಿ ಅರೇಬಿಯಾ, ಭೂತಾನ್, ಚೀನಾ, ಮ್ಯಾನ್ಮಾರ್, ಮಾಲ್ಡೀವ್ಸ್, ಥೈಲ್ಯಾಂಡ್, ಇರಾನ್ ಮತ್ತು ಇನ್ನೂ ಹೆಸರಿಸದ ಎರಡು ತಂಡಗಳು ಕಾಣಿಸಿಕೊಳ್ಳಲಿದೆ. ಅಂದರೆ ಹೊಸ ತಂಡಗಳ ಉತ್ತೇಜನಕ್ಕಾಗಿ ಈ ಟೂರ್ನಿಯನ್ನು ಆಯೋಜಿಸಲಾಗುತ್ತಿದೆ.

ಇದರ ಜೊತೆಗೆ ಮಾರ್ಚ್‌ನಲ್ಲಿ ತಲಾ 35 ಓವರ್‌ಗಳ 16 ವರ್ಷದೊಳಗಿನವರ ಪ್ರಾದೇಶಿಕ ಪಂದ್ಯಾವಳಿ ನಡೆಯಲಿದೆ. ಟೂರ್ನಿಯಲ್ಲಿ ಪ್ರದೇಶವಾರು ಎಂಟು ತಂಡಗಳು ಭಾಗವಹಿಸಲಿವೆ. ಇನ್ನು ಪುರುಷರ ಚಾಲೆಂಜರ್ಸ್ ಕಪ್‌ನ ವಿಜೇತರು ಮತ್ತು ರನ್ನರ್‌ಅಪ್‌ಗಳು 50 ಓವರ್‌ಗಳ ಪಂದ್ಯಾವಳಿಯಾದ ಪುರುಷರ ಪ್ರೀಮಿಯರ್ ಕಪ್‌ಗೆ ಅರ್ಹತೆ ಪಡೆಯಲಿದ್ದಾರೆ. ಈ ಟೂರ್ನಿಯಲ್ಲಿ ಯುಎಇ, ನೇಪಾಳ, ಕುವೈತ್, ಕತಾರ್, ಓಮನ್, ಹಾಂಗ್ ಕಾಂಗ್, ಸಿಂಗಾಪುರ್ ಮತ್ತು ಮಲೇಷ್ಯಾ ತಂಡಗಳು ಕಾಣಿಸಿಕೊಳ್ಳಲಿದೆ.

ಜೂನ್ ಮತ್ತು ಜುಲೈನಲ್ಲಿ ಮಹಿಳೆಯರ ಟಿ20 ಎಮರ್ಜಿಂಗ್ ತಂಡಗಳ ಏಷ್ಯಾ ಕಪ್ ಮತ್ತು ಪುರುಷರ ಎಮರ್ಜಿಂಗ್ ತಂಡಗಳ ಏಷ್ಯಾ ಕಪ್ ನಡೆಯಲಿದೆ. ಇಲ್ಲಿ ಎಮರ್ಜಿಂಗ್ ತಂಡಗಳಾಗಿ ಏಷ್ಯಾದ ಲೀಸ್ಟ್ ಎ ಟೀಮ್​ಗಳು ಕಣಕ್ಕಿಳಿಯಲಿವೆ. ಅಂದರೆ ಭಾರತ ಎ, ಪಾಕಿಸ್ತಾನ್ ಎ, ಶ್ರೀಲಂಕಾ ಎ ಸೇರಿದಂತೆ ಒಟ್ಟು 8 ತಂಡಗಳು ಆಡಲಿವೆ. ಇದಾದ ಬಳಿಕ ಭಾರತ-ಪಾಕಿಸ್ತಾನ್ ಒಳಗೊಂಡಂತೆ ಏಷ್ಯಾಕಪ್ 2023 ನಡೆಯಲಿದೆ.

ಪುರುಷರ ಏಷ್ಯಾಕಪ್ ಬಳಿಕ ಅಂಡರ್ 19 ಚಾಲೆಂಜರ್ ಕಪ್, ಅಂಡರ್ 19 ಪ್ರೀಮಿಯರ್ ಕಪ್ ಮತ್ತು ಅಂಡರ್​ 19 ಏಷ್ಯಾ ಕಪ್ ಕ್ರಮವಾಗಿ ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ನಡೆಯಲಿದೆ.

2024 ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಟಿ20 ಚಾಲೆಂಜರ್ ಕಪ್ ಜರುಗಲಿದೆ. ಇದರಲ್ಲಿ 14 ರಿಂದ 23ರವರೆಗಿನ ರ್ಯಾಂಕಿಂಗ್ ಹೊಂದಿರುವ ತಂಡಗಳು ಸೆಣಸಲಿದೆ. ಇದರ ನಂತರ ಕ್ರಮವಾಗಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಪುರುಷರ ಮತ್ತು ಮಹಿಳೆಯರ T20 ಪ್ರೀಮಿಯರ್ ಕಪ್ ನಡೆಯಲಿದೆ. ಇದರಲ್ಲಿ 6 ರಿಂದ 13 ರ್ಯಾಂಕಿಂಗ್ ಹೊಂದಿರುವ ಏಷ್ಯನ್ ಟೀಮ್​ಗಳುಸ ಸೆಣಸಲಿದೆ.

ಮಹಿಳೆಯರ ಟಿ20 ಏಷ್ಯಾ ಕಪ್ ಸೆಪ್ಟೆಂಬರ್‌ನಲ್ಲಿ ನಡೆಯಲಿದ್ದು, ಇದಾದ ಬಳಿಕ ಅಕ್ಟೋಬರ್ ಮತ್ತು ಡಿಸೆಂಬರ್‌ನಲ್ಲಿ ಪುರುಷರ ಅಂಡರ್​ 19 ಏಷ್ಯಾ ಕಪ್ ಮತ್ತು ಪುರುಷರ ಟಿ20 ಎಮರ್ಜಿಂಗ್ ತಂಡಗಳ ಏಷ್ಯಾ ಕಪ್ ನಡೆಯಲಿದೆ.

ಒಟ್ಟಿನಲ್ಲಿ ಮುಂದಿನ 2 ವರ್ಷಗಳಲ್ಲಿ ಒಟ್ಟು 145 ಪಂದ್ಯಗಳನ್ನು ಆಯೋಜಿಸುವ ಮೂಲಕ ಏಷ್ಯಾದಲ್ಲಿ ಕ್ರಿಕೆಟ್​ ತಂಡಗಳನ್ನು ಮತ್ತಷ್ಟು ಬಲಿಷ್ಠಗೊಳಿಸುವ ಭರ್ಜರಿ ಪ್ಲ್ಯಾನ್ ರೂಪಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!