Wednesday, October 5, 2022

Latest Posts

ಅಮೆರಿಕದಲ್ಲಿ ತಾರಕಕ್ಕೇರಿದ ಹಣದುಬ್ಬರ: ರಾತ್ರೋರಾತ್ರಿ 10 ಬಿಲಿಯನ್ ಡಾಲರ್ ಕಳೆದುಕೊಂಡ ಜೆಫ್ ಬೆಜೋಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಹಣದುಬ್ಬರದ ಪರಿಣಾಮ ಶ್ರೀಮಂತ ಬಿಲಿಯನೇರ್‌ಗಳ ನಿವ್ವಳ ಮೌಲ್ಯವು ಮಂಗಳವಾರ ಕುಸಿತಗೊಂಡಿದ್ದು, ಜೆಫ್ ಬೆಜೋಸ್ ಅವರ ಸಂಪತ್ತು ಒಂದೇ ದಿನದಲ್ಲಿ 9.8 ಶತಕೋಟಿ ಡಾಲರ್ (ಸುಮಾರು 80,000 ಕೋಟಿ) ನಷ್ಟು ಮತ್ತು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಅವರ ನಿವ್ವಳ ಮೌಲ್ಯವು 8.4 ಬಿಲಿಯನ್ ಡಾಲರ್ (ಸುಮಾರು 70,000 ಕೋಟಿ) ಕಡಿಮೆಯಾಗಿದೆ.

ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಮಂಗಳವಾರ ಭಾರೀ ಕುಸಿತದಿಂದ ಶ್ರೀಮಂತ ಬಿಲಿಯನೇರ್ ಗಳು 93 ಬಿಲಿಯನ್ ಅಮೆರಿಕನ್ ಡಾಲರ್ ಕಳೆದುಕೊಂಡಿದ್ದಾರೆ. ಇದು 9ನೇ ಅತೀಕೆಟ್ಟ ದೈನಂದಿನ ನಷ್ಟವಾಗಿದೆ.

ಇನ್ನು ಮಾರ್ಕ್ ಜುಕರ್ ಬರ್ಗ್, ಲಾರೆ ಪೇಜ್, ಸೆರ್ಗೆ ಬ್ರಿನ್ ಹಾಗೂ ಸ್ಟೀವ್ ಬಾಲ್ಮೆರ್ ಅವರ ಸಂಪತ್ತಿನಲ್ಲಿ 4 ಬಿಲಿಯನ್ ಡಾಲರ್ ಗಿಂತಲೂ ಅಧಿಕ ಇಳಿಕೆಯಾಗಿದೆ. ಇನ್ನು ವಾರೆನ್ ಬಫೆಟ್ ಹಾಗೂ ಬಿಲ್ ಗೇಟ್ಸ್ ಸಂಪತ್ತಿನಲ್ಲಿ ಕ್ರಮವಾಗಿ 3.4 ಬಿಲಿಯನ್ ಡಾಲರ್ ಹಾಗೂ 2.8 ಬಿಲಿಯನ್ ಡಾಲರ್ ಇಳಿಕೆಯಾಗಿದೆ.

ಅಮೆರಿಕದಲ್ಲಿ ಆಗಸ್ಟ್ ತಿಂಗಳಲ್ಲಿ ಹಣದುಬ್ಬರ ನಿರೀಕ್ಷೆಗಿಂತ ಹೆಚ್ಚಿರೋದು ಪ್ರಕಟವಾಗುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಫೆಡರಲ್ ಬ್ಯಾಂಕ್ ಬಡ್ಡಿದರವನ್ನು ಮುಂದಿನ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಲಿದೆ ಎಂಬ ಲೆಕ್ಕಾಚಾರದಲ್ಲಿ ಮಾರಾಟ ಮಾಡಲು ಪ್ರಾರಂಭಿಸಿದ್ದಾರೆ. ಎಸ್ ಆಂಡ ಪಿ 500 ಶೇ.4.4ಕ್ಕೆ ಕುಸಿದಿದ್ದು, ಇದು 2020ರ ಜೂನನಂತರದ ಅತೀದೊಡ್ಡ ಇಳಿಕೆಯಾಗಿದೆ. ಇನ್ನು ತಂತ್ರಜ್ಞಾನಕ್ಕೆ ಸಂಬಂಧಿಸಿದ ನಾಸ್ಡಾಕ್ 100 ಸೂಚ್ಯಂಕ ಶೇ.5.5ಕ್ಕೆ ಇಳಿಕೆಯಾಗಿದೆ. 2020ರ ಮಾರ್ಚ್ ನಲ್ಲಿ ಇದು ಶೇ.12ಕ್ಕೆ ಇಳಿಕೆಯಾಗಿತ್ತು. ಆ ಬಳಿಕದ ಗರಿಷ್ಠ ಇಳಿಕೆ ಇದಾಗಿದೆ.

ಕಳೆದ ತಿಂಗಳಷ್ಟೇ ಅಮೆರಿಕದ ಇದೇ ಬಿಲಿಯನೇರ್ ಗಳು ಫೆಡರಲ್ ರಿಸರ್ವ್ ಮುಖ್ಯಸ್ಥ ಜೆರೋಮ್ ಪೊವೆಲ್ ಅವರ ಎಂಟು ನಿಮಿಷಗಳ ಭಾಷಣದ ಬಳಿಕ ಒಂದೇ ದಿನದಲ್ಲಿ 78 ಬಿಲಿಯನ್ ಡಾಲರ್ ಕಳೆದುಕೊಂಡಿದ್ದರು. ವಿಶ್ವದ 500 ಶ್ರೀಮಂತ ವ್ಯಕ್ತಿಗಳು ಈ ವರ್ಷದ ಪ್ರಾರಂಭಕ್ಕೆ ಹೋಲಿಸಿದ್ರೆ 1.2 ಟ್ರಿಲಿಯನ್ ಡಾಲರ್ ಕಳೆದುಕೊಂಡಿದ್ದರು.

ಅಮೆರಿಕದಲ್ಲಿ ಆಗಸ್ಟ್ ನಲ್ಲಿ ಹಣದುಬ್ಬರ ಶೇ.8.3ರಷ್ಟಿದೆ. ನಿತ್ಯ ಬಳಕೆ ವಸ್ತುಗಳ ಬೆಲೆಯೇರಿಕೆಯಿಂದ ಅಮೆರಿಕದ ಜನತೆ ಈಗಾಗಲೇ ತತ್ತರಿಸಿದ್ದಾರೆ. ಅಮೆರಿಕದ ಕೇಂದ್ರ ಬ್ಯಾಂಕ್ ಫೆಡರಲ್ ರಿಸರ್ವ್ ಕಠಿಣ ಕ್ರಮಗಳನ್ನು ಕೈಗೊಂಡಿದ್ದರೂ ಹಣದುಬ್ಬರ ನಿಯಂತ್ರಣಕ್ಕೆ ಬಂದಿಲ್ಲ. ಮುಂದಿನ ವಾರ ಫೆಡರಲ್ ರಿಸರ್ವ್ ಬಡ್ಡಿ ದರವನ್ನು ಇನ್ನಷ್ಟು ಏರಿಕೆ ಮಾಡುವ ಸಾಧ್ಯತೆ ದಟ್ಟವಾಗಿದೆ.

ಅಮೆರಿಕದ ಕರೆನ್ಸಿ ಡಾಲರ್ (Dollar) ಆಧಾರದಲ್ಲೇ ಅಂತಾರಾಷ್ಟ್ರೀಯ ವಹಿವಾಟುಗಳು ನಡೆಯುವ ಕಾರಣ ಅಮೆರಿಕದ ಹಣದುಬ್ಬರ, ಅಲ್ಲಿನ ಅಧಿಕ ಬಡ್ಡಿದರ, ಕಠಿಣ ವಿತ್ತೀಯ ಕ್ರಮಗಳು ಇತರ ರಾಷ್ಟ್ರಗಳ ಕರೆನ್ಸಿ ಹಾಗೂ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತವೆ. ಈಗಾಗಲೇ ಭಾರತದಿಂದ ವಿದೇಶಿ ಬಂಡವಾಳ ಹೊರಹರಿವು ಹೆಚ್ಚಿದೆ. 2021ರ ಅಕ್ಟೋಬರ್ ನಿಂದ ವಿದೇಶಿ ಹೂಡಿಕೆದಾರರು ಭಾರತೀಯ ಮಾರುಕಟ್ಟೆಗಳಿಂದ ಹಣವನ್ನು ಹಿಂಪಡೆಯುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!