ಹೊಸದಿಗಂತ ವರದಿ ಲಕ್ಷ್ಮೇಶ್ವರ:
ತಾಲೂಕಿನ ಶೆಟ್ಟಿಕೆರೆಯ ಗ್ರಾಮದ ಕೆರೆಯಲ್ಲಿ ವಿವಿಧ ರೀತಿಯ ಜಲಚರಗಳು ಕಂಡು ಬಂದಿವೆ. ಈ ಹಿಂದೆ ಅಪರೂಪದ ನೀರಿ ನಾಯಿ ಸೇರಿದಂತೆ ವಿವಿಧ ರೀತಿಯ ಮೀನುಗಳು ಇಲ್ಲಿ ಸಿಕ್ಕಿವೆ. ಈಗ ಅಪರೂಪದ ಅಳಿವಿನಂಚಿನಲ್ಲಿರುವ ಟೆಸ್ಟುಡಿನಿಡೆ ಕುಟುಂಬಕ್ಕೆ ಸೇರಿದ ನಕ್ಷತ್ರ ಆಮೆ ಪತ್ತೆಯಾಗಿದ್ದು, ಇದು 10 ಇಂಚಿನಷ್ಟು ಉದ್ದ ಬೆಳೆಯುತ್ತದೆ. ಇದರ ದೇಹದ ಗುರಾಣಿಮೇಲೆ ನಕ್ಷತ್ರ ಆಕಾರದ ಗಾಢ ವರ್ಣ ವಿನ್ಯಾಸ ಹೊಂದಿದೆ. ನಕ್ಷತ್ರ ಮಾದರಿಯ ಈ ಆಮೆ ವೈಶಿಷ್ಟ್ಯದಿಂದ ಕೂಡಿದೆ.
ಈ ಆಮೆ ಬಹು ಅಪುರೂಪವಾಗಿದ್ದು, ಭಾರತ, ಶ್ರೀಲಂಕಾ, ಪಾಕಿಸ್ತಾನಗಳಲ್ಲಿನ ಹುಲ್ಲುಗಾವಲು, ಸಸ್ಯ ಪೊದೆಗಳಲ್ಲಿ ಕಂಡು ಬರುತ್ತವೆ. ದುರಾದೃಷ್ಟವಶಾತ್ ಭಾರತೀಯ ನಕ್ಷತ್ರ ಆಮೆಗಳು ಅಂತಾರಾಷ್ಟ್ರೀಯ ವಿಲಕ್ಷಣ ಸಾಕುಪ್ರಾಣಿ ವ್ಯಾಪಾರದಲ್ಲಿ ಜನಪ್ರಿಯವಾಗಿದೆ. ಅದಲ್ಲದೆ ಇದನ್ನು ಸಾಕಿದರೆ ಐಶ್ವರ್ಯ ವೃದ್ಧಿಯಾಗಬಹುದು ಎಂಬ ಮೂಢನಂಬಿಕೆಯೂ ಇದೆ. ಅದಕ್ಕಾಗಿ ಹಾಗೂ ಮಾಂಸಕ್ಕಾಗಿಯೂ ಇದನ್ನು ಸಾಕಿ, ಮಾರಾಟ ಮಾಡುತ್ತಾರೆ.
ಪ್ರಸ್ತುತ ಈ ಆಮೆ ಶೆಟ್ಟಿಕೆರೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಪ್ರಕಾಶ ಗಾಣಿಗೇರ ಅವರಿಗೆ ಸಿಕ್ಕಿದೆ. ಆಗಾಗ ಈ ರೀತಿಯ ವಿಶಿಷ್ಟ ಜಲಚರಗಳು ಶೆಟ್ಟಿಕೆರೆ ಗ್ರಾಮದ ಕೆರೆಯಲ್ಲಿ ಕಂಡುಬರುತ್ತವೆ. ಆದ್ದರಿಂದ ಶೆಟ್ಟಿಕೆರೆ ವಿಶಿಷ್ಟ ಜಲಜೀವಿಗಳ ಸಂಗ್ರಹಾಲಯವಾಗಿ ಮಾರ್ಪಾಡಾಗಿದೆ.