Tuesday, February 27, 2024

ಭಾರತದಲ್ಲಿ ಬೃಹತ್​ ವಿಸ್ತರಣೆಗೆ ಸಜ್ಜಾಗಲಿದೆ ಸ್ಟಾರ್​ಬಕ್ಸ್​ ಕಾಫಿಹೌಸ್!

ಹೊಸದಿಂಗತ ಡಿಜಿಟಲ್ ಡೆಸ್ಕ್:

ಅಂತಾರಾಷ್ಟ್ರೀಯ ಮಟ್ಟದ ಕಾಫಿ ಹೌಸ್​ ಟಾಟಾ ಸ್ಟಾರ್​ಬಕ್ಸ್ ತನ್ನ ಮಳಿಗೆಗಳ ವಿಸ್ತರಣೆಯನ್ನು ಘೋಷಿಸಿದೆ. ಪ್ರಸ್ತುತ ಇರುವ 390 ಕಾಫಿ ಹೌಸ್​ನಿಂದ 2028ರ ವೇಳೆಗೆ 1,000 ಮಳಿಗೆಗಳಿಗೆ ವಿಸ್ತರಿಸುವುದಾಗಿ ಹೇಳಿದೆ. ಹೀಗಾಗಿ ಭಾರತದ ನಗರಗಳಲ್ಲಿ ಸ್ಟಾರ್​ ಬಕ್ಸ್​ ಮಳಿಗೆಗಳ ಸಂಖ್ಯೆ ಹೆಚ್ಚಾಗಲಿದ್ದು ಸುಲಭವಾಗಿ ಈ ಪ್ರತಿಷ್ಠಿತ ಕಾಫಿ ಹೌಸ್​ನಲ್ಲಿ ಕಾಫಿ ಕುಡಿಯಬಹುದು.

ಟಾಟಾ ಗ್ರೂಪ್ ಮತ್ತು ಜಾಗತಿಕ ಕಾಫಿ ಜಾಲವಾಗಿರುವ ಸ್ಟಾರ್​ಬಕ್ಸ್​ ನಡುವಿನ ಸಮಾನ ಜಂಟಿ ಉದ್ಯಮ ಇದಾಗಿದ್ದು , ಪ್ರತಿ ಮೂರು ದಿನಗಳಿಗೊಮ್ಮೆ ಹೊಸ ಮಳಿಗೆ ಆರಂಭಿಸುವ ಯೋಜನೆಯನ್ನು ಹೊಂದಿದೆ. ಈ ಮೂಲಕ ಭಾರತದ 2ನೇ ಹಾಗೂ 3ನೇ ಹಂತದ ನಗರಗಳನ್ನು ಪ್ರವೇಶಿಸಲು ಮುಂದಾಗಿದೆ.

ಭಾರತ​ 2030ರ ವೇಳೆಗೆ ಜಾಗತಿಕವಾಗಿ 3ನೇ ಅತಿದೊಡ್ಡ ಆರ್ಥಿಕತೆಯಾಗಲು ಸಜ್ಜಾಗಿದೆ. ಹೀಗಾಗಿ ಬೆಳೆಯುತ್ತಿರುವ ಮಾರುಕಟ್ಟೆಯಲ್ಲಿ ತನ್ನ ಉಪಸ್ಥಿತಿಯನ್ನು ಹೆಚ್ಚಿಸಲು ಸ್ಟಾರ್​ಬಕ್ಸ್ ಯೋಜನೆ ರೂಪಿಸಿದೆ.

2028ರ ವೇಳೆಗೆ ಒಟ್ಟಾರೆ ಅಸ್ತಿತ್ವವನ್ನು 1,000 ಮಳಿಗೆಗಳಿಗೆ ಕೊಂಡೊಯ್ಯುವ ಗುರಿಯ ಜತೆಗೆ ಸ್ಟಾರ್​ಬಕ್ಸ್​ನ ಉದ್ಯೋಗಿಗಳ ಸಂಖ್ಯೆ 8,600ಕ್ಕೆ ದ್ವಿಗುಣಗೊಳ್ಳಲಿದೆ. ಎಲ್ಲ ಹಂತದ ಭಾರತೀಯ ನಗರಗಳು. ವಿಮಾನ ನಿಲ್ದಾಣಗಳು ಮತ್ತು 24 ಗಂಟೆಗಳ ಕಾಲ ತೆರೆದಿಡುವಂಥ ಕಾಫಿ ಹೌಸ್​ಗಳನ್ನು ನಿರ್ಮಿಸುವುದು ಸ್ಟಾರ್ ಬಕ್ಸ್​ ಉದ್ದೇಶವಾಗಿದೆ.

ವರದಿಯ ಪ್ರಕಾರ 2023 ರ ಹಣಕಾಸು ವರ್ಷದಲ್ಲಿ ಕಂಪನಿಯ ಮಾರಾಟವು ಶೇಕಡಾ 71ರಷ್ಟು ಏರಿಕೆಯಾಗಿ 1,087 ಕೋಟಿ ರೂ.ಗೆ ತಲುಪಿದೆ. ನಾವು ಅಭಿವೃದ್ಧಿಯ ಮುಂದಿನ ಅಧ್ಯಾಯಕ್ಕೆ ಸಾಗುತ್ತಿದ್ದೇವೆ. ನಮ್ಮ ಗ್ರಾಹಕರೊಂದಿಗೆ ಸಂಪರ್ಕ ಹೆಚ್ಚಿಸುತ್ತಿದ್ದೇವೆ. ಜತೆಗೆ ಭಾರತದ ಕಾಫಿ ಸಂಸ್ಕೃತಿಯನ್ನು ವಿಸ್ತರಿಸುತ್ತೇವೆ ಎಂದು ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್​​ನ ವ್ಯವಸ್ಥಾಪಕ ನಿರ್ದೇಶಕ ಸುನಿಲ್​ ಡಿಸೋಜಾ ಹೇಳಿದ್ದಾರೆ.

ಚಿಲ್ಲರೆ ಉದ್ಯಮಗಳಲ್ಲಿ ವೃತ್ತಿಜೀವನವನ್ನು ಬಯಸುವ ಯುವತಿಯರಿಗೆ ವೃತ್ತಿಪರ ಕೌಶಲ್ಯ ತರಬೇತಿ ನೀಡುವ ಮೂಲಕ ಕಂಪನಿಯು ಭಾರತದಲ್ಲಿ ಮಹಿಳಾ ಸಬಲೀಕರಣ ಮಾಡಲಿದೆ ಎಂದು ಸ್ಟಾರ್​ ಬಕ್ಸ್​ ಹೇಳಿಕೆಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!