ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಲಕ್ಕಿ ನಗರ ಹಾವೇರಿಯಲ್ಲಿ ಮೂರು ದಿನಗಳ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ರಾಷ್ಟ್ರ, ನಾಡ ಹಾಗೂ ಕನ್ನಡ ಸಾಹಿತ್ಯ ಪರಿಷತ್ನ ಧ್ವಜಾರೋಹಣ ಮೂಲಕ ಅಕ್ಷರ ಜಾತ್ರೆಗೆ ಚಾಲನೆ ನೀಡಲಾಯಿತು.
ಕಾರ್ಮಿಕ ಇಲಾಖೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ್ ಜೋಶಿ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ ಮಾಡಿದರು. ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ ನಾಡ ಧ್ವಜಾರೋಹಣ ಮಾಡಿದರು.
ಎಲ್ಲರೂ ನೆನಪಿನಲ್ಲಿ ಇಡುವಂಥ ಸಾಹಿತ್ಯ ಸಮ್ಮೇಳನ ಇದಾಗಿರಲಿದೆ ಎಂದು ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ. ನಾಡು ನುಡಿಯ ಬಗ್ಗೆ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಉತ್ತಮ ಚರ್ಚೆ ನಡೆಯಲಿದೆ, ಯಾವುದೇ ಕುಂದು ಕೊರತೆ ಇಲ್ಲದಂತೆ ಸಮ್ಮೇಳನ ನಡೆಸಲಿದ್ದೇವೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.