ಇಂದು ರಾಜ್ಯ ಬಜೆಟ್‌ ಮಂಡನೆ: ಗ್ಯಾರೆಂಟಿ ಜೊತೆಗೆ ಏನೇನೆಲ್ಲಾ ಸಿಗಲಿದೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನೂತನ ಕಾಂಗ್ರೆಸ್‌ ಸರ್ಕಾರದ ಬಜೆಟ್‌ ಅನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸುತ್ತಿದ್ದು, ಗ್ಯಾರಂಟಿ ಯೋಜನೆಗಳ ಜೊತೆಗೆ ಇನ್ನೂ ಹಲವಾರು ಮಹತ್ವದ ಘೋಷಣೆಗಳನ್ನು ಮಾಡುವ ಸಾಧ್ಯತೆ ಇದೆ.

ಸಿಎಂ ಸಿದ್ದರಾಮಯ್ಯ 14ನೇ ಬಾರಿಗೆ ರಾಜ್ಯ ಸರ್ಕಾರದ ಆಯವ್ಯಯ ಮಂಡಿಸಿ ದಾಖಲೆ ಮಾಡಿದ್ದು, ರಾಜ್ಯದ ಜನರ ಚಿತ್ತ ಸಿಎಂ ಸಿದ್ದರಾಮಯ್ಯರತ್ತ ನೆಟ್ಟಿದೆ. ಇಂದು ಮಧ್ಯಾಹ್ನ 12 ಗಂಟೆ ಸರಿಯಾಗಿ, 14ನೇ ಬಾರಿಗೆ ಬಜೆಟ್ ಮಂಡನೆಯಾಗಲಿದೆ. ಇದು ಪೂರ್ಣಪ್ರಮಾಣದ ಬಜೆಟ್ ಅಲ್ಲ, ಹೊಸ ಸರ್ಕಾರದ ಪೂರಕ ಬಜೆಟ್. ಕಾಂಗ್ರೆಸ್ ಘೋಷಿಸಿದ ಐದು ಗ್ಯಾರಂಟಿ ಜಾರಿ ಜೊತೆಗೆ ಆರ್ಥಿಕ ವ್ಯವಸ್ಥೆ ಸರಿದೂಗಿಸುವ ಬಜೆಟ್ ಮಂಡಿಸಲಿದ್ದಾರೆ ಸಿದ್ದರಾಮಯ್ಯ. ಈ ಬಜೆಟ್‌ನ ಗಾತ್ರ 3.35ಲಕ್ಷ ಕೋಟಿ ರೂಪಾಯಿ ದಾಟುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಚುನಾವಣೆಗೂ ಮುನ್ನ ರಾಜ್ಯ ಕಾಂಗ್ರೆಸ್ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳ ಜೊತೆಗೆ ಹಲವು ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದ್ದು, ಕೊಟ್ಟ ಭರವಸೆಯಂತೆ ಅಂಗನವಾಡಿ, ಆಶಾ ಕಾರ್ಯಕರ್ತರ ಗೌರವಧನ ಹೆಚ್ಚಳ ಮಾಡಲು ತಯಾರಿ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಈಗಾಗಲೇ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳ ಜೊತೆಗೆ ಬಜೆಟ್ ಪೂರ್ವ ತಯಾರಿ ಸಭೆಗಳನ್ನು ನಡೆಸಿದ್ದು, ಅಂತಿಮವಾಗಿ ಇಂದು ಬಜೆಟ್‌ ಮಂಡಿಸಲಿದ್ದಾರೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇದು ನಿರ್ಣಾಯಕ ಬಜೆಟ್ ಆಗಿದ್ದು, ಚುನಾವಣಾ ಲಾಭ ತರುವ ಆಯವ್ಯಯ ಮಂಡಿಸಲು ಸಿಎಂ ಸಿದ್ಧತೆ ಮಾಡಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!