ರಾಜ್ಯ ಕಾಂಗ್ರೆಸ್ಸಿಗರು ತಮಿಳುನಾಡಿನವರ ಜೊತೆಗೆ ಸೂಟ್‌ಕೇಸ್ ಸಂಬಂಧ ಹೊಂದಿದ್ದಾರೆ: ಸಿ.ಟಿ.ರವಿ ಆರೋಪ

ಹೊಸದಿಗಂತ ವರದಿ ಮಂಡ್ಯ :

ತಮಿಳುನಾಡಿನವರ ಜೊತೆ ಕಾಂಗ್ರೆಸ್‌ನವರು ರಾಜಕೀಯ ಸಂಬಂಧ ಹೊಂದಿರುವುದರ ಜೊತೆಗೆ ಸೂಟ್‌ಕೇಸ್ ಸಂಬಂಧವನ್ನೂ ಹೊಂದಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ ಆರೋಪಿಸಿದರು.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಕಾವೇರಿ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿ, ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರಕ್ಕೆ ಬರುವುದಕ್ಕೆ ಕರ್ನಾಟಕದಿಂದ ಸೂಟ್‌ಕೇಸ್ ರವಾನೆಯಾಗಿತ್ತು. ಅದೇ ರೀತಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಕ್ಕೆ ಸ್ಟಾಲಿನ್ ಅಲ್ಲಿಂದಲೂ ಸೂಟ್‌ಕೇಸ್ ಕಳುಹಿಸಿದ್ದರು. ಆ ವಿಶ್ವಾಸಕ್ಕಾಗಿ ನೀರಿನ ಹಕ್ಕನ್ನು ತಮಿಳುನಾಡು ಮುಂದೆ ಅಡವಿಟ್ಟಿದ್ದಾರೆ ಎಂದು ಟೀಕಿಸಿದರು.

ಕಾವೇರಿ ವಿಚಾರದಲ್ಲಿ ಸೋನಿಯಾ ಗಾಂಧಿ ಮಧ್ಯೆ ಪ್ರವೇಶ ಮಾಡುವುದು ಸೂಕ್ತ. ಏಕೆಂದರೆ ತಮಿಳುನಾಡಿನಲ್ಲಿ ಇಂಡಿಯಾ ಅಲೆಯನ್ಸ್‌ ಅಧಿಕಾರದಲ್ಲಿದೆ. ಸೋನಿಯಾ ಮಾತನ್ನು ಸ್ಟಾಲಿನ್ ಕೇಳುತ್ತಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಡಿಎಂಕೆ ಪರ ಚುನಾವಣಾ ಪ್ರಚಾರಕ್ಕೆ ಹೋಗಿದ್ದರು. ರಾಜಕೀಯ ಸಂಬಂಧ ಬೆಳೆಸಲು ಬೆಂಗಳೂರಿಗೆ ಓಡೋಡಿ ಬರುವ ಸ್ಟಾಲಿನ್, ನೀರಿನ ವಿಚಾರ ಮಾತನಾಡುವುದಕ್ಕೆ ಬರುವುದಿಲ್ಲವೇ. ತಮಿಳುನಾಡಿಗೆ ಇವರೇ ಹೋಗಿ ಏಕೆ ಮಾತನಾಡುತ್ತಿಲ್ಲ. ಜಲಸಂಪನ್ಮೂಲ ಸಚಿವರು ಸೆಟ್ಲ್‌ಮೆಂಟ್ ರಾಜಕಾರಣದಲ್ಲಿ ಬಿಸಿ ಇರುವಂತೆ ಕಾಣುತ್ತೆ ಎಂದು ಲೇವಡಿ ಮಾಡಿದರಲ್ಲದೆ, ಕಾವೇರಿ ಮತ್ತು ಕಾಸಿನ ನಡುವೆ ಕಾಸಿಗೆ ಈ ಸರ್ಕಾರ ಹೆಚ್ಚಿನ ಮಹತ್ವ ಕೊಡುತ್ತಿದೆ ಎಂದು ಹರಿಹಾಯ್ದರು.

ಅಧಿಕಾರಕ್ಕಾಗಿ ಮೇಕೆದಾಟು ಪಾದಯಾತ್ರೆ ಮಾಡಿ ಈಗ ರೈತರ ಕೈಗೆ ಚಿಪ್ಪು ಕೊಟ್ಟಿದ್ದಾರೆ. ಇವರನ್ನು ನಂಬಿ ಮತ ಹಾಕಿದ ಜನರಿಗೆ ಅನ್ಯಾಯವೆಸಗಿದ್ದಾರೆ. ನೀರೆಲ್ಲವನ್ನೂ ಬಿಟ್ಟು ಆನಂತರ ಸರ್ವಪಕ್ಷ ಸಭೆ ಕರೆಯುತ್ತಾರೆ. ನೀರು ಬಿಡುಗಡೆ ವಿಚಾರದಲ್ಲಿ ಹೆಜ್ಜೆ ಹೆಜ್ಜೆಗೂ ತಪ್ಪು ಮಾಡುತ್ತಲೇ ಬರುತ್ತಿದೆ. ನೀರಿನ ವಾಸ್ತವ ಚಿತ್ರಣವನ್ನು ಪ್ರಾಧಿಕಾರ ಮತ್ತು ನ್ಯಾಯಾಲಯದ ಮುಂದೆ ಇಡದಿರುವುದೇ ನಮಗೆ ಅನ್ಯಾಯವಾಗಲು ಕಾರಣವಾಗಿದೆ. ಕಾಂಗ್ರೆಸ್ ಸರ್ಕಾರ ನೀರಿನ ವಿಚಾರದಲ್ಲಿ ಅಸಹಾಯಕತೆ ಪ್ರದರ್ಶಿಸುತ್ತಿದೆಯೋ, ತಮಿಳುನಾಡಿನ ಜೊತೆಗಿರುವ ಆತ್ಮೀಯತೆ ಪ್ರದರ್ಶಿಸುತ್ತಿದೆಯೋ ಗೊತ್ತಿಲ್ಲ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!