ಹೊಸದಿಗಂತ ವರದಿ,ಕೃಷ್ಣರಾಜಪೇಟೆ :
ರಾಜ್ಯ ಸರ್ಕಾರವು ನೀಡುತ್ತಿರುವ ವಿವಿಧ ಗ್ಯಾರಂಟಿಗಳ ಪೈಕಿ ಶೇ.50ರಷ್ಟು ಕೂಡ ಜನತೆಗೆ ಸರಿಯಾಗಿ ತಲುಪುತ್ತಿಲ್ಲ, ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಜನವಿರೋಧಿ ಆಡಳಿತದಿಂದ ರಾಜ್ಯದ ಜನತೆ ಭ್ರಮನಿರಸನಗೊಂಡಿದ್ದಾರೆ ಎಂದು ಜೆಡಿಎಸ್ ವರಿಷ್ಠ ರಾಜ್ಯದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಅವರು ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಬೆಳತೂರು ಗ್ರಾಮದಲ್ಲಿ ಶ್ರೀಕೋಟೆ ರಂಗನಾಥಸ್ವಾಮಿ ದೇವಾಲಯದ ಜೀರ್ಣೋದ್ಧಾರ, ವಿಗ್ರಹದ ಪುನರ್ ಪ್ರತಿಷ್ಠಾಪನೆ, ವಿಮಾನ ಗೋಪುರ ಮತ್ತು ಗರುಡಗಂಭದ ಪ್ರತಿಷ್ಠಾಪನೆ, ಮಹಾಕುಂಭಾಬಿಷೇಕ ಮಹೋತ್ಸವದಲ್ಲಿ ಭಾಗವಹಿಸಿ ನೂತನ ದೇವಾಲಯವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ರಾಜ್ಯದ ಜನತೆ ಕಾಂಗ್ರೇಸ್ ಪಕ್ಷವು ಘೋಷಿಸಿದ ಗ್ಯಾರಂಟಿಗಳಿಗೆ ಮಾರುಹೋಗಿ 136 ಸ್ಥಾನಗಳನ್ನು ನೀಡಿದ್ದಾರೆ. ಆದರೆ ಜನತೆಯ ವಿಶ್ವಾಸವನ್ನು ಉಳಿಸಿಕೊಳ್ಳಲು ವಿಫಲವಾಗಿರುವ ಸರ್ಕಾರವು ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸಿ ಬೇಜವಾಬ್ಧಾರಿತನದಿಂದ ವರ್ತಿಸುತ್ತಿದೆ.
ಗೃಹಲಕ್ಷ್ಮೀ ಹಾಗೂ ಬಡವರ ಪಡಿತರದ ಅಕ್ಕಿಯ ಹಣವು ಶೇ.50ರಷ್ಟು ಫಲಾನುಭವಿಗಳಿಗೆ ಕೂಡಾ ತಲುಪುತ್ತಿಲ್ಲ. 200ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದ್ದ ಕಾಂಗ್ರೇಸ್ ಈಗ ಪ್ರಸ್ತುತ ಎಷ್ಟು ಯೂನಿಟ್ ವಿದ್ಯುತ್ತನ್ನು ಉಚಿತವಾಗಿ ನೀಡುತ್ತಿದೆ ಎಂಬುದು ಬಹಿರಂಗ ಸತ್ಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಕುಮಾರಸ್ವಾಮಿ ರಾಜ್ಯದ ರೈತರು ತೀವ್ರವಾದ ಬರವನ್ನು ಎದುರಿಸುತ್ತಿರುವುದರಿಂದ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುದ ಘೋಷಣೆ ಮಾಡಿ ಎದೆಗಾರಿಕೆಯನ್ನು ಪ್ರದರ್ಶಿಸಬೇಕು ಎಂದು ಸವಾಲು ಹಾಕಿದ ಮಾಜಿ ಸಿಎಂ ಪಂಚರಾಜ್ಯಗಳ ಚುನಾವಣಾ ಫಲಿತಾಂಶದಿಂದ ಕಂಗಾಲಾಗಿರುವ ಕಾಂಗ್ರೇಸ್ ಪಕ್ಷವು ಹಣದ ಹೊಳೆ ಹರಿಸಿ ಆಶ್ವಾಸನೆಗಳು ಮತ್ತು ಭರವಸೆಯನ್ನು ನೀಡಿ ತೆಲಂಗಾಣ ರಾಜ್ಯದಲ್ಲಿ ಮಾತ್ರ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ ಎಂದು ಲೇವಡಿ ಮಾಡಿದರು.